ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ನಮ್ಮ ನಾಡಿನ ಪ್ರಸಿದ್ಧ ಶಕ್ತಿದೇವತೆಯಾಗಿರುವ ಯಲ್ಲಾಪುರದ ಗ್ರಾಮದೇವಿಯ ಜಾತ್ರಾಮಹೋತ್ಸವವು ನೆರವೇರುತ್ತಿರುವುದು ಸಂತೋಷದ ಸಂಗತಿಯಾಗಿದೆ. ಜಗನ್ಮಾತೆಯ ಈ ಆರಾಧನೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಸಮಸ್ತ ಆಸ್ತಿಕ ಭಕ್ತ-ಮಹಾಜನತೆಗೆ ಶುಭಾಶಂಸನೆಗಳು.ಸಮಸ್ತ ಜಗತ್ತಿಗೂ ಅಧಿಷ್ಠಾತ್ರಿಯಾದ ಜಗನ್ಮಾತೆಯನ್ನು ಅನೇಕ ರೀತಿಯಿಂದ ಆರಾಧಿಸುವ ಅನಾದಿ ಪರಂಪರೆ ನಮ್ಮದು. ಆಕೆಯನ್ನು ಜಗತ್ತಿನ ತಾಯಿಯೆಂದೂ, ಪರಮಾತ್ಮನ ಶಕ್ತಿ-ಪರಾಶಕ್ತಿಯೆಂದೂ, ತ್ರಿಗುಣಾತ್ಮಿಕೆಯಾದ ಮಾಯೆಯೆಂದೂ, ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣರಾದ ಬ್ರಹ್ಮ-ವಿಷ್ಣು-ಮಹೇಶ್ವರರ ಮಡದಿಯೆಂದೂ, ದುಷ್ಟರನ್ನು ಸಂಹರಿಸಿ-ಶಿಷ್ಟರ ಕಷ್ಟವನ್ನು ಪರಿಹರಿಸಿ, ಇಷ್ಟವನ್ನು ನೆರವೇರಿಸುವ ಭಗವತಿಯೆಂದೂ, ಹೀಗೆ ಇನ್ನೂ ಅನೇಕ ರೀತಿಯಿಂದ ಭಕ್ತರು ತಮ್ಮ ಅಂತರಂಗದಲ್ಲಿ ಧ್ಯಾನಿಸುತ್ತಾರೆ. ಅಲ್ಲದೇ ಕೇವಲ ಶಕ್ತಿದೇವತೆಯನ್ನೇ ವಿಶೇಷವಾಗಿ ಆರಾಧಿಸುವ ಶಾಕ್ತಸಂಪ್ರದಾಯವೂ ನಮ್ಮ ಪರಂಪರೆಯಲ್ಲಿ ಸೇರಿಕೊಂಡಿದೆ.
ಶಾಸ್ರೋಕ್ತ ವಿಧಿಯಿಂದ ಯಜ್ಞ ಯಾಗಾದಿಗಳ ಮೂಲಕ ಹವಿಸ್ಸನ್ನು ಸಮರ್ಪಿಸಿ ದೇವಿಯನ್ನು ಆರಾಧಿಸುವುದು, ಹರಿದ್ರಾ-ಕುಂಕುಮ, ಫಲ-ಪುಷ್ಪ ಮೊದಲಾದ ಪರಿಕರಗಳಿಂದ ಪೂಜಿಸುವುದು, ಸ್ತೋತ್ರ-ಪಾರಾಯಣಗಳ ಮೂಲಕ ಭಜಿಸುವುದು, ಜಪ-ತಪ ಧ್ಯಾನಾದಿಗಳ ಮೂಲಕ ಉಪಾಸಿಸುವುದು, ಹೀಗೆ ಹತ್ತು-ಹಲವು ವಿಧಗಳಿಂದ ಭಗವತಿಯ ಆರಾಧನೆ ನೆರವೇರುತ್ತದೆ. ಭೋಗಸ್ವರ್ಗಾಪವರ್ಗದಾ ಸ್ವರ್ಗಾಪವರ್ಗದೇ ದೇವಿ ನಾರಾಯಣಿ ನಮೋಸುತೇಮುಂತಾಗಿ ಭಗವತಿಯನ್ನು ಸ್ತುತಿಸಿದ್ದಾರೆ. ಅಂದರೆ ಜಗನ್ಮಾತೆಯು ಐಹಿಕಾಮುತ್ಮಿಕವಾದ ಸಕಲ ಸೌಭಾಗ್ಯಗಳನ್ನೂ ಕರುಣಿಸುತ್ತಾಳೆ,
ಅಂತೆಯೇ ಚರಮ-ಪರಮ ಲಕ್ಷ್ಯವಾಗಿರುವ ಮೋಕ್ಷವನ್ನೂ ಅನುಗ್ರಹಿಸುತ್ತಾಳೆ. ಈ ಹಿನ್ನೆಲೆಯಲ್ಲಿಯೇ ಅನಾದಿ ಪರಂಪರೆಯಿಂದಲೂ ಸಕಾಮ ಹಾಗೂ ನಿಷ್ಕಾಮ ಭಕ್ತರು ಆಕೆಯನ್ನು ಭಜಿಸುತ್ತಾ ಬಂದಿದ್ದಾರೆ. ಹೀಗೆ ಭಜಿಸುವುದಕ್ಕೆ ಪೂಜಿಸುವುದಕ್ಕೆ ಪ್ರಾಚೀನ ಋಷಿ-ಮುನಿಗಳು ನಮಗೆ ತೋರಿಸಿಕೊಟ್ಟ ವ್ಯವಸ್ಥಿತ ಮಾರ್ಗವೇ ತಂತ್ರ-ಆಗಮ-ಕಲ್ಪ-ವಿಧಿ-ಪದ್ಧತಿ ಮೊದಲಾದ ಶಾಸ್ತ್ರೀಯ ಪರಿಭಾಷೆಯಲ್ಲಿ ಗುರುತಿಸಲ್ಪಟ್ಟು, ಇಂದಿಗೂ ಅವಿಚ್ಛಿನ್ನವಾಗಿ ಮುಂದುವರೆದುಕೊಂಡು ಬಂದಿದೆ.
ಇಂಥ ಪಾರಂಪರಿಕ ಪದ್ಧತಿಗಳಲ್ಲಿ ಜಾತ್ರೆ ಅಥವಾ ಉತ್ಸವಗಳ ಮೂಲಕ ದೇವತೆಯನ್ನು ವಿಶೇಷವಾಗಿ ಆರಾಧಿಸುವುದೂ ಒಂದು ವಿಧವಾಗಿದೆ. ಪ್ರಸ್ತುತ ಯಲ್ಲಾಪುರದ ಗ್ರಾಮದೇವಿಯ ಜಾತ್ರಾಮಹೋತ್ಸವವು ಕೇವಲಜನಜಂಗುಳಿಯ ಬಹಿರಂಗದ ಜಾತ್ರೆಯಾಗಿರದೇ, ಜಗನ್ಮಾತೆಯ ಸ್ಮರಣೆಯೊಂದಿಗೆ ನೆರವೇರುವ ಅಂತರಂಗದ ಯಾತ್ರೆಯೂ ಆಗಲೆಂದು ಆಶಿಸುತ್ತೇವೆ. ಈ ವಿಶೇಷ ಸಂದರ್ಭದಲ್ಲಿ ಭಕ್ತರಿಂದ ಭಜಿಸಲ್ಪಟ್ಟು ಸಂಪ್ರೀತಳಾದ ಭಗವತಿಯು ಲೋಕಕ್ಕೆ ಕ್ಷೇಮ-ಅಭ್ಯುದಯಗಳನ್ನು ಕರುಣಿಸಲೆಂದು ಆಶಿಸುತ್ತೇವೆ.
ಲೋಕಾಃ ಸಮಸ್ತಾಃ ಸುಖಿನೋ ಭವಂತು ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಸ್ಥಳ: ಶ್ರೀ ಸ್ವರ್ಣವಲ್ಲೀ ಮಠ. ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ.
