ಸುದ್ದಿ ಕನ್ನಡ ವಾರ್ತೆ

. ಶಿರಸಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರಿಶ್ರಮದಿಂದ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದ 11 ಜಿಲ್ಲೆಗಳ ಒಂದು ಲಕ್ಷ ರೈತರಿಗೆ 104 ಕೋಟಿ ರೂಪಾಯಿಗಳ ವಿಮಾ ಪರಿಹಾರವನ್ನು ಇನ್ನು ಒಂದು ವಾರದೊಳಗೆ ಜಮಾ ಮಾಡಲು ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ನಿರ್ದೇಶಕರಾದ ಚಂದ್ರಜಿತ್ ಚಟರ್ಜಿ ಅವರು ಕ್ಷೇಮ ಇನ್ಸೂರೆನ್ಸ್ ಕಂಪನಿಗೆ ಆದೇಶ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಕೆ.ಎಸ್.ಎನ್.ಎಂ.ಡಿ.ಸಿ ನಿರ್ವಹಿಸಬೇಕಾದ ಹವಾಮಾನ ವರದಿಯನ್ನು ನಿರ್ದಿಷ್ಟವಾಗಿ ನೀಡದೇ ಇರುವುದರಿಂದ ರೈತರಿಗೆ ವಿಮಾ ಪರಿಹಾರ ದೊರಕುವಲ್ಲಿ ಸಮಸ್ಯೆ ಸೃಷ್ಟಿಯಾಗಿತ್ತು. ಇದನ್ನೆ ಪ್ರಮುಖ ಅಂಶವನ್ನಾಗಿಟ್ಟುಕೊಂಡು ಕ್ಷೇಮ ಇನ್ಸೂರೆನ್ಸ್ ಕಂಪನಿ ಇದನ್ನೇ ಕಾರಣವನ್ನಾಗಿ ನೀಡಿ ವಿಮಾ ಪರಿಹಾರ ನೀಡಲು ಅಸಹಾಯಕತೆಯನ್ನು ತೋರಿಸಿತ್ತು.ಸಂಸದ ಕಾಗೇರಿಯವರು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆರ್.ಡಬ್ಲ್ಯೂ.ಬಿ.ಸಿ.ಐ.ಎಸ್ (RWBCIS) ನಿಯಮಗಳಂತೆ ಸಂರಕ್ಷಣಾ ಪೋರ್ಟಲ್ ನಲ್ಲಿರುವ ಡಾಟಾವನ್ನು ಪುನಃ ಪರಿಶೀಲಿಸಿ ಸರಿಯಾಗಿದೆ ಎಂಬ ಮಾಹಿತಿಯನ್ನು ಕರ್ನಾಟಕ ರಾಜ್ಯ ತೋಟಗಾರಿಕಾ ಇಲಾಖೆ ವತಿಯಿಂದ ಸಲ್ಲಿಕೆಯಾಗುವಂತೆ ಮಾಡಿದ್ದರು.

ಇದನ್ನು ಪರಿಶೀಲಿಸಿದ ಕೇಂದ್ರ ಸರ್ಕಾರ ನಿಯಮಗಳಂತೆ ಸಂರಕ್ಷಣ ಪೋರ್ಟಲ್ ನಲ್ಲಿ ದಾಖಲಾಗಿರುವ ಡಾಟಾ ನೈಜವಾಗಿದೆ, ಆದ್ದರಿಂದ ವಿಮಾ ಪರಿಹಾರವನ್ನು ರೈತರಿಗೆ ವಿಮಾ ಕಂಪನಿ ನೀಡಲೇಬೇಕು ಎಂದು ಆದೇಶ ಮಾಡಿದೆ. ಈ ಸಂದರ್ಭದಲ್ಲಿ ವಿಮಾ ಕಂಪನಿಯವರು 2024 25 ನೇ ಸಾಲಿನಲ್ಲಿ ಸಂಗ್ರಹಿಸಿರುವ ರೈತರ ವಂತಿಗೆ ಸರಕಾರಗಳ ವಂತಿಗೆ ಒಟ್ಟು 80 ಕೋಟಿ ರೂಪಾಯಿಗಳಾಗಿದ್ದು ಅದನ್ನು ಮರಳಿಸುತ್ತೇವೆ ಎಂದು ಹೇಳಿತ್ತು.ಆದರೆ ಇನ್ಸೂರೆನ್ಸ್ ಕಾಯ್ದೆಯಂತೆ ಒಮ್ಮೆ ಪ್ರೀಮಿಯಂ ಸ್ವೀಕರಿಸಿದ ನಂತರದಲ್ಲಿ ಸಂಪೂರ್ಣವಾಗಿ ಕರಾರನ್ನು ಪೂರ್ತಿಗೊಳಿಸದೆ ಏಕ ಪಕ್ಷಿಯವಾಗಿ ವಿಮಾ ಕಂಪನಿ ಹಿಂದೆ ಸರಿಯಲಾಗದು ಮತ್ತು ಏಳು ದಿನಗಳ ಅವಧಿಯಲ್ಲಿ ರೈತರಿಗೆ ನೀಡಬೇಕಾದ 104 ಕೋಟಿ ರೂಪಾಯಿಗಳನ್ನು ವಿಮಾ ಕಂಪನಿ ನೀಡಬೇಕು. ಇಲ್ಲದಿದ್ದಲ್ಲಿ ವಿಮಾ ಕಂಪನಿಯ ವಿರುದ್ಧ ಕೇಂದ್ರ ಸರಕಾರ ಹಣಕಾಸು ದಂಡನೆಯನ್ನು ವಿಧಿಸುವುದಲ್ಲದೆ ಆಡಳಿತಾತ್ಮಕವಾದ ಮತ್ತು ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಇನ್ಸೂರೆನ್ಸ್ ಕಂಪನಿಗೆ ಸ್ಪಷ್ಟ ಆದೇಶವನ್ನು ಮಾಡಿದೆ ಎಂದು ಸದಾನಂದ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.