ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ:ಉತ್ತರಕನ್ನಡ
ಜಿಲ್ಲೆಯ ಹೃದಯಭಾಗವಾದ ಯಲ್ಲಾಪುರದ ಅಧಿದೇವತೆಯರಾದ ಶ್ರೀ ಗ್ರಾಮದೇವಿಯರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ರಾಜ್ಯದ ಅತಿ ದೊಡ್ಡ ಜಾತ್ರೆಗಳಲ್ಲೊಂದಾದ ಯಲ್ಲಾಪುರ ಜಾತ್ರೆಗಾಗಿ ಪಟ್ಟಣ ಮದುವಣಗಿತ್ತಿಯಂತೆ ಶೃಂಗರಿಸುತ್ತಿದೆ.

ಇಂದಿನಿಂದ (ಫೆ.11) ರಿಂದ ಫೆ.19 ರವರೆಗೆ ನಡೆಯಲಿರುವ ಗ್ರಾಮದೇವಿ ಜಾತ್ರೆಯನ್ನು ಸಂಭ್ರಮಿಸಲು ಯಲ್ಲಾಪುರದ ಜನತೆ ಸಿದ್ಧರಾಗಿದ್ದಾರೆ. ಸದಾ ಭಕ್ತರನ್ನು ಹರಸುವ ಹಾಗೂ ತನ್ನ ವೈಶಿಷ್ಟ್ಯಪೂರ್ಣ ಆಚರಣೆಗಳಿಂದ ಎಲ್ಲರ ಗಮನ ಸೆಳೆಯುವ ಯಲ್ಲಾಪುರ ಜಾತ್ರೆಯನ್ನು ಕಣ್ಣುಂಬಿಕೊಳ್ಳಲು ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಅದರಲ್ಲೂ ಜಾತ್ರೆಯ ಮೊದಲ ಹಾಗೂ ಕೊನೆಯ ದಿನ ದೇವಿಯರ ಮೆರವಣಿಗೆಯನ್ನು (ಹೊನ್ನಾಟ)ನೋಡಲು ಜನಸಾಗರವೇ ಹರಿದು ಬರುವುದು ವಿಶೇಷ.

ದೇವಿಯರಲ್ಲಿ ಜಾತ್ರೆ ನಡೆಸಲು ಅಪ್ಪಣೆ ಪಡೆದು ದಿನಾಂಕವನ್ನು ನಿಗದಿಪಡಿಸುವುದರೊಂದಿಗೆ ಜಾತ್ರೆಯ ವಿಧಿ ವಿಧಾನಗಳು ಆರಂಭಗೊಳ್ಳುತ್ತದೆ. ಅಂದೇ ಹೊರ ಮಂಗಳವಾರದ ಘೋಷಣೆಯನ್ನು ಸಹ ಮಾಡಲಾಗುತ್ತದೆ. ಜಾತ್ರೆಗೆ 7 ದಿನಗಳ ಮುಂಚೆ ದೇವರಿಗೆ ‘ಅಂಕೆ ಹಾಕಿ, ಹೊಸದಾಗಿ ಬಣ್ಣ ಹಚ್ಚಲಾಗುತ್ತದೆ. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಯಾವುದೇ ಪೂಜಾ ಕಾರ್ಯಗಳು ನಡೆಯುವುದಿಲ್ಲ. ನಂತರ ಜಾತ್ರೆಯ ಹಿಂದಿನ ದಿನ ಮಂಗಳವಾರದಂದು ದೇವರ ಪ್ರತಿಷ್ಠಾಪನೆ ಹಾಗೂ ವಿವಾಹಕಾರ್ಯಗಳು ನೆರವೇರುತ್ತವೆ. ಜಾತ್ರೆಯ ದಿನ, ದೇವಿಯರ ಅಣ್ಣನೆಂದು ಕರೆಯಲ್ಪಡುವ ರಾಮಾಪುರದ ಶಳೆ ದೇವರ ಅನುಮತಿ ದೊರೆತ ನಂತರವೇ ದೇವಿಯರ ಮೆರವಣಿಗೆ ಆರಂಭವಾಗುತ್ತದೆ. ಎರಡೂ ಅಕ್ಕ ತಂಗಿಯರ ಭವ್ಯ ಮೂರ್ತಿಯನ್ನು ಭಕ್ತರು ತಲೆ ಮೇಲೆ ಹೊತ್ತು ಜಾತ್ರಾ ಗದ್ದುಗೆಯೆಡೆಗೆ ತೆರಳುತ್ತಾರೆ. ಸಹಸ್ರಾರು ಜನರ ನಡುವೆ ದಾರಿಯೂ ಕಾಣದಂತಿದ್ದರೂ, ತಮ್ಮಿಷ್ಟದಂತೆ ಮೆರೆವಣಿಗೆಯಲ್ಲಿ ದೇವಿಯರೇ ಹೊತ್ತವರನ್ನು ನಡೆಸುತ್ತಾರೆ ಎಂಬುದು ಭಕ್ತರ ನಂಬಿಕೆ. ಅಕ್ಕಿ ತಂಗಿಯರು ಪರಸ್ಪರ ಮುಖಾ ಮುಖಿಯಾಗಿ ಭೇಟಿಯಾಗುವುದನ್ನು ಕಂಡಾಗ ಜನರ ಹರ್ಷೋದ್ಘಾರಕ್ಕೆ ಮಿತಿ ಇರುವುದಿಲ್ಲ.
ಯಲ್ಲಾಪುರ ಜಾತ್ರೆಯ ವೈಶಿಷ್ಟ್ಯತೆಗಳಲ್ಲೊಂದು ಅದರ ಜಾತ್ರಾ ಮಂಟಪ. ಹಿಂದಿನಿಂದಲೂ ಜಾತ್ರೆಯ ಮಂಟಪವನ್ನು ಕಲಾತ್ಮಕವಾಗಿ ಹಾಗೂ ಕಣ್ಮನ ಸೆಳೆಯುವಂತೆ ಸಿದ್ಧಪಡಿಸಲಾಗುತ್ತದೆ. ಈ ಬಾರಿ ಕಂಚಿಯ ದೇಗುಲವನ್ನು ಹೋಲುವ ಹೊಯ್ಸಳ ಶಿಲ್ಪ ಕಲಾ ಶೈಲಿಯ ಮಂಟಪದಲ್ಲಿ, ದಶಾವತಾರದ ಚಿತ್ರಣವನ್ನು ರಚಿಸಲಾಗಿದೆ.
ಈ ಬಾರಿಯ ಜಾತ್ರೆಯ ವೈಟಿಎಸ್‌ಎಸ್‌ ಮೈದಾನ, ಮಾದರಿ ಶಾಲೆ ಮೈದಾನ ಹಾಗೂ ದೇವಿ ಮೈದಾನದ ಬಳಿಯ ಜಾಗದಲ್ಲಿ ನಾನಾತರನಾದ ಅಮ್ಯೂಸಮೆಂಟ್ಪಾರ್ಕ್ ನಿರ್ಮಿಸಲಾಗಿದೆ. ವಿವಿಧ ಬಗೆಯ ರೋಚಕ ಆಟಗಳನ್ನು ಆಡಲು ಯುವಜನತೆ ಕಾದು ಕುಳಿತಿದ್ದಾರೆ.

ಈ ಬಾರಿಯ ಜಾತ್ರೆಗೆ ಪೊಲೀಸ್ ಸರ್ಪಗಾವಲು ನಿರ್ಮಿಸಿದೆ. ಫೇಸ್ ರೆಕಾಗ್ನಿಷನ್ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಪ್ರತಿಯೊಬ್ಬರ
ಚಲನವಲನಗಳ ಮೇಲೆ ನಿಗಾ ಇರಿಸಲಿದೆ. ಜಾತ್ರಾ ಸುರಕ್ಷತೆಯ ದೃಷ್ಟಿಯಿಂದ ಡಿವೈಎಸ್‌ಪೊ, 6 ಪೊಲೀಸ್ ಇನ್ಸೆಕ್ಟರ್, 25 ಪಿಎಸ್‌ಐ, 34 ಎಎಸ್‌ಐ, 250 ಪೊಲೀಸ್ ಸಿಬ್ಬಂದಿಗಳು, ಮಹಿಳಾ ಸಿಬ್ಬಂದಿಗಳು 35, 71 ಹೋಂ ಗ್ಯಾರ್ಡ್ಸ್, 3 ಕೆಸ್‌ಆರ್‌ಪಿ ಮತ್ತು 4 ಡಿಎಆರ್ ತುಕಡಿಗಳನ್ನು ನೇಮಿಸಲಾಗಿದೆ.