Banner Ad

ಸುದ್ದಿ ಕನ್ನಡ ವಾರ್ತೆ
ರಾಮನಗರ: ರಾಮನಗರ-ಧಾರವಾಡ ಹೆದ್ದಾರಿಯ ಕೊಡಗೈ ಕ್ರಾಸ್ ಸಮೀಪದ ತಿರುವಿನಲ್ಲಿ ಬೊಲೆರೋ ಪಿಕ್‌ ಅಪ್ ವಾಹನ ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೃತ ದುರ್ದೈವಿಯನ್ನು ಗೋವಾ ರಾಜ್ಯದ ಪೊಂಡಾ ತಾಲೂಕಿನ ಬೇಟೊಡಾ ನಿವಾಸಿ ಮೊಹಮ್ಮದ್ ಇಜಾಜ್ (18) ಎಂದು ಗುರುತಿಸಲಾಗಿದೆ. ಸ್ಕೂಟ-‌ರ್ ಚಲಾಯಿಸುತ್ತಿದ್ದ ಅಬ್ದುಲ್ ಲತೀಫ್ (22) ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸಂಭವಿಸಿದ ತಕ್ಷಣ ಬೊಲೆರೋ ಪಿಕ್‌ ಅಪ್ ಚಾಲಕ ಮಾನವೀಯತೆ ಮರೆತು ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಕುಂಭಾರಡಾ ಸಮೀಪ ಹೋಗುತ್ತಿದ್ದಂತೆ ಬೊಲೆರೊ ವಾಹನದ ಟೈರ್ ಸ್ಫೋಟಗೊಂಡಿದೆ. ಇದರಿಂದಾಗಿ ವಾಹನ ಮುಂದೆ ಚಲಿಸಲಾಗದೆ ಮಾರ್ಗಮಧ್ಯೆ ನಿಂತಿದ್ದು, ಚಾಲಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Banner Ad

ಘಟನಾ ಸ್ಥಳಕ್ಕೆ ಲೋಂಡಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಂಚನಾಮೆ ಪೂರೈಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಖಾನಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Banner Ad