ಸುದ್ದಿ ಕನ್ನಡ ವಾರ್ತೆ
. ಶಿರಸಿ: ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಕೆಡಿಸಿಸಿ) ಆಡಳಿತ ಮಂಡಳಿಯ ಚುನಾವಣಾ ಕಣದ ಅಂತಿಮ ಚಿತ್ರಣ ಹೊರಬಿದ್ದಿದ್ದು, ಶಾಸಕ ಶಿವರಾಮ ಹೆಬ್ಬಾರ್ ಅವರ ಬಣ ಸ್ಪಷ್ಟ ಬಹುಮತದೊಂದಿಗೆ ಬ್ಯಾಂಕ್ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.
ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಬಾಕಿ ಉಳಿದಿದ್ದ ‘ಗ್ರಾಹಕರ ಮತ್ತು ಸಂಸ್ಕರಣಾ ಸಹಕಾರಿ ಸಂಘಗಳ’ ಕ್ಷೇತ್ರದ ಮತ ಎಣಿಕೆ ಶನಿವಾರ ಇಲ್ಲಿನ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ನಡೆಯಿತು. ತೀವ್ರ ಕುತೂಹಲ ಮೂಡಿಸಿದ್ದ ಈ ಕ್ಷೇತ್ರದಲ್ಲಿ ಹೆಬ್ಬಾರ್ ಬಣದ ನಿರಂಜನ ಭಟ್ ಅವರು 20 ಮತಗಳನ್ನು ಪಡೆದು ವಿಜಯಿಯಾದರೆ, ಅವರ ಪ್ರತಿಸ್ಪರ್ಧಿ ತಿಮ್ಮಯ್ಯ ಹೆಗಡೆ 14 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.ಇದರೊಂದಿಗೆ ಒಟ್ಟು 16 ಚುನಾಯಿತ ನಿರ್ದೇಶಕ ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು ಶಿವರಾಮ ಹೆಬ್ಬಾರ್ ಬಣ 11 ಸ್ಥಾನಗಳಲ್ಲಿ ಹಾಗೂ ಸಚಿವ ಮಂಕಾಳ ವೈದ್ಯ ಅವರ ಬಣ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
ಕಳೆದ ಅಕ್ಟೋಬರ್ 25 ರಂದೇ ಚುನಾವಣೆ ನಡೆದಿದ್ದರೂ, ವಿವಿಧ ಕ್ಷೇತ್ರಗಳ ಕುರಿತು ನ್ಯಾಯಾಲಯದಲ್ಲಿ ತಕರಾರು ಅರ್ಜಿಗಳಿದ್ದ ಕಾರಣ ಫಲಿತಾಂಶ ಘೋಷಣೆ ವಿಳಂಬವಾಗಿತ್ತು. ಧಾರವಾಡ ಹೈಕೋರ್ಟ್ ಪೀಠದ ಸೂಚನೆಯಂತೆ ಫೆಬ್ರವರಿ 7 ರಂದು ಅಂತಿಮ ಕ್ಷೇತ್ರದ ಎಣಿಕೆ ಕಾರ್ಯ ನಡೆಯಿತು. ಚುನಾವಣಾಧಿಕಾರಿಯಾಗಿ ಸಹಾಯಕ ಆಯುಕ್ತ ಚಂದ್ರಶೇಖರ ಜಿ.ಆರ್. ಕಾರ್ಯನಿರ್ವಹಿಸಿದರು.
