ಸುದ್ದಿ ಕನ್ನಡ ವಾರ್ತೆ
ಶಿರಸಿ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪೋಟೊಗಳನ್ನು ಬಳಸಿಕೊಂಡು ರಾಜಕೀಯ ವಿರೋಧಿಗಳ ನಿಂದನೆ ಮಾಡುವ ಮನಸ್ಥಿತಿ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರಂತಹ ಹಿರಿಯರಿಗೆ ಶೋಭೆಯಲ್ಲ, ಇಂತಹ ವರ್ತನೆ ತೀರಾ ಬಾಲಿಷವಾದುದು ಎಂದು ಬಿಜೆಪಿ ಜಿಲ್ಲಾ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಿದ್ದಾಪುರ ತಾಲೂಕಿನಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳಿಗೆ ಯಾವುದೇ ಸಮುದಾಯದವರಾದರೂ ಶಿಕ್ಷೆ ಆಗಲೇಬೇಕು. ತಪ್ಪು ಯಾರು ಮಾಡಿದರೂ ತಪ್ಪು. ಕೊಲೆ ಮಾಡಿರುವ ಆರೋಪಿಗಳು ರಾಜಕೀಯ ವ್ಯಕ್ತಿಗಳೊಡನೆ ಈ ಹಿಂದೆ ಪೋಟೊ ತೆಗೆಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಇವರನ್ನು ಹೋಲಿಸುವುದು ಯಾರಿಗೂ ಶೋಭೆಯಲ್ಲ. ಎಲ್ಲ ಪಕ್ಷದವರ ಜೊತೆಗೂ ಉತ್ತಮ ಒಡನಾಟ ಇರುವ ವ್ಯಕ್ತಿಗಳು ಇರುತ್ತಾರೆ. ವ್ಯಕ್ತಿ ತಪ್ಪು ಮಾಡಿದಾಗ ಅದನ್ನು ಬೇರೆಯವರ ಜೊತೆ ತಳುಕು ಹಾಕಿ ಚಿಲ್ಲರೆ ರಾಜಕೀಯ ಮಾಡುವುದು ಯಾರಿಗೂ ಶೋಭೆಯಲ್ಲ.
ನನ್ನನ್ನು ಒಳಗೊಂಡು ಸಾರ್ವಜನಿಕ ಜೀವನದಲ್ಲಿರುವವರು ಸಾವಿರಾರು ಜನರನ್ನು ಭೇಟಿಯಾಗುತ್ತಾರೆ. ಸಿದ್ದಾಪುರ ಪ್ರಕರಣದಲ್ಲಿ ಆರೋಪಿಯಾಗಿರುವ ಜ್ಯೋತಿಷಿಯು ನನ್ನ ಜೊತೆಗೂ ಪೋಟೊ ತೆಗೆಸಿಕೊಂಡಿದ್ದಾರೆ, ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ ಜೊತೆಗೂ ಪೋಟೊ ಹಂಚಿಕೊಂಡಿದ್ದಾರೆ. ಹೀಗಿರುವಾಗ ಅವರಿಗೂ ಈ ಕೊಲೆಗೆ ತಳುಕು ಹಾಕಿ ರಾಜಕೀಯ ಮಾಡುತ್ತಾರೆಯೇ ? ಸಾಮಾಜಿಕ ಜೀವನದಲ್ಲಿ ಯಾರ್ಯಾರೋ ಫೋಟೋ ತೆಗೆಸಿಕೊಂಡರು ಎಂಬ ಕಾರಣಕ್ಕೆ, ಅವರ ಖಾಸಗಿ ಬದುಕಿನ ವಿಕೃತಿಗಳಿಗೆ ಅಥವಾ ಅವರು ಎಸಗುವ ಕ್ರಿಮಿನಲ್ ಕೃತ್ಯಗಳಿಗೆ ರಾಜಕೀಯ ನಾಯಕರನ್ನು ಉತ್ತರದಾಯಿ ಮಾಡುವುದು ಮೂರ್ಖತನ. ಅಪರಾಧವನ್ನು ಅಪರಾಧವನ್ನಾಗಿ ನೋಡುವ ಸಂಸ್ಕಾರ ಬೆಳೆಸಿಕೊಳ್ಳಬೇಕು. ಶವದ ಮುಂದೆ ನಿಂತು ರಾಜಕೀಯ ಲಾಭ ಹುಡುಕುವ ಚಾಳಿ, ಸ್ವಸ್ಥ ಸಮಾಜಕ್ಕೆ ಮತ್ತು ಸಂವಿಧಾನಕ್ಕೆ ಮಾಡುವ ದ್ರೋಹ ಎನಿಸುತ್ತದೆ ಎಂಬುದಾಗಿ ನಮ್ಮ ಬಿಜೆಪಿ ಶಾಸಕರಾಗಿರುವ ಸುರೇಶ ಕುಮಾರ್ ಅವರು ತಿರುಗೇಟು ನೀಡಿರುವುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ರಾಜಕೀಯದಲ್ಲಿ ಮೂರ್ನಾಲ್ಕು ದಶಕದ ಅನುಭವ ಇರುವ ಹರಿಪ್ರಸಾದ್ ಅಂತವರಿಗೆ ಈ ರೀತಿಯ ಕೀಳು ಅಭಿರುಚಿ ಥರವಲ್ಲ. ಅದೇ ರೀತಿಯಲ್ಲಿ ಸ್ಥಳಿಯವಾಗಿ ಸಹ ಕಾಂಗ್ರೆಸಿಗರು ಸಾಮಾಜಿಕ ಜಾಲತಾಣದಲ್ಲಿ ನನ್ನ ಪೋಟೊ ಹಂಚುತ್ತಿರುವುದು ಇವರ ಬುದ್ಧಿಗೇಡಿತನವನ್ನು ಸಾಬೀತುಪಡಿಸಿದಂತೆ ಕಾಣಿಸುತ್ತದೆ. ಒಟ್ಟಾರೆಯಾಗಿ ಕಾಂಗ್ರೆಸಿಗರ ಮನಸ್ಥಿತಿಯೇ ಇದೆ ಆಗಿದೆ ಎಂದು ಅನಂತಮೂರ್ತಿ ಹೆಗಡೆ ಕಿಡಿಕಾರಿದ್ದಾರೆ.
