ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಶಿವಶರಣರ ಪ್ರಸಿದ್ಧ ಪುಣ್ಯ ಕ್ಷೇತ್ರ, ಉತ್ತರಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಉಳವಿಯ ಶ್ರೀ ಚನ್ನಬಸವೇಶ್ವರ ಜಾತ್ರೆಯ ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ದೇವರ ರಥವನ್ನು ಎಳೆಯುವ ಮೂಲಕ ಮಹಾರಥೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು.
ವಿಶಾಲವಾದ ರಥಬೀದಿಯಲ್ಲಿ ಅಲಂಕೃತ ರಥದಲ್ಲಿ ಶ್ರೀ ದೇವರು ವಿರಾಜಮಾನರಾಗಿರುವ ರಥವನ್ನು ನೆರೆದಿದ್ದ ಭಕ್ತರು ಹರಹರ ಮಹಾದೇವ,ಅಡಿಕೇಶ್ವರ ಮಡಿಕೇಶ್ವರ ಉಳವಿ ಚನ್ನಬಸವೇಶ್ವರ ಎಂಬ ಘೋಷಣೆಯನ್ನು ಮೊಳಗಿಸಿ, ವಾದ್ಯಗಳೊಂದಿಗೆ,ಎಳೆದರು. ಭಕ್ತರು ಶ್ರೀ ದೇವರಲ್ಲಿ ಭಜನೆ,ಕೀರ್ತನೆ,ದೀಡ ನಮಸ್ಕಾರ,ಉರುಳು ಸೇವೆ,ಪಾದಯಾತ್ರೆ ಸೇರಿದಂತೆ ನಾನಾರೀತಿಯ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿ ತಮ್ಮ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಕ್ತಿಯಿಂದ ಬೇಡಿಕೊಂಡರು.
ಜಾತ್ರೆಗೆ ಭಕ್ತರು ಪಾದಯಾತ್ರೆ, ಚಕ್ಕಡಿ ಗಾಡಿ, ಟ್ಯಾಕ್ಟರ್,ಸಾರಿಗೆ ಬಸ್,ಖಾಸಗಿ ವಾಹನಗಳಲ್ಲಿ ಧಾರವಾಡ,ಬೆಳಗಾವಿ,ಬೈಲಹೊಂಗಲ,ಹಾವೇರಿ,ಹುಬ್ಬಳ್ಳಿ,ಹಳಿಯಾಳ,ದಾಂಡೇಲಿ,ನಮ್ಮ ತಾಲೂಕಿನ ಭಕ್ತರು ಸೇರಿದಂತೆ ಇನ್ನೂ ಅನೇಕ ಭಾಗಗಳಿಂದ ಆಗಮಿಸಿದ್ದರು. ಜಾತ್ರೆಯ ಮಹಾರಥೋತ್ಸವದಲ್ಲಿ ದೇವಸ್ಥಾನ ಟ್ರಸ್ಟ್ ಸಮಿತಿಯ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು,ದೇವಸ್ಥಾನದ ಪ್ರಧಾನ ಅರ್ಚಕರು,ಇನ್ನುಳಿದ ಅರ್ಚಕ ವೃಂದದವರು,ವಿವಿಧ ಕ್ಷೇತ್ರದ ಗಣ್ಯರು,ಸ್ಥಳೀಯ ಗ್ರಾಮ ಪಂಚಾಯತ ಜನಪ್ರತಿನಿಧಿಗಳು, ಜಿಲ್ಲಾಡಳಿತ,ತಾಲೂಕಾಡಳಿತ,ಅರಣ್ಯ ಇಲಾಖೆಯ ಅಧಿಕಾರಿ ವರ್ಗದವರು,ಉಪಸ್ಥಿತರಿದ್ದು, ಪೋಲಿಸ್ ಇಲಾಖೆಯ ಅಧಿಕಾರಿ,ಸಿಬ್ಬಂದಿ ವರ್ಗದವರು ಬಂದೋಬಸ್ತ ಕಲ್ಪಿಸುವ ಮೂಲಕ ಜಾತ್ರೆಯ ಯಶಸ್ಸಿಗೆ ಸಹಕಾರ ನೀಡಿದರು. ಜಾತ್ರೆಯಲ್ಲಿ ಪೂಜಾ ಸಾಮಗ್ರಿಗಳ, ಮಿಠಾಯಿ,ತಿಂಡಿತಿನಿಸಿನ,ತಂಪು ಪಾನೀಯ,ಅಲಂಕೃತ ವಸ್ತುಗಳ,ಬಟ್ಟೆಗಳ,ಪಾತ್ರೆಗಳ, ಆಟಿಕೆಯ ವಸ್ತುಗಳ, ದಿನಬಳಕೆಯ ವಸ್ತುಗಳ, ಮಹಿಳೆಯರ ಅಲಂಕೃತ ವಸ್ತುಗಳ ಅಂಗಡಿಗಳು ಸೇರಿದಂತೆ ಇನ್ನಿತರ ವಸ್ತುಗಳ ವ್ಯಾಪಾರ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿ ನಡೆಯಿತು.ಇನ್ನೂ ಎರಡುದಿನಗಳ ಕಾಲ ಜಾತ್ರೆಯ ಸಂಭ್ರಮದ ವಾತಾವರಣ ಇರಲಿದೆ.
