ಸುದ್ದಿ ಕನ್ನಡ ವಾರ್ತೆ
ಶಿರಸಿ: ಸೋಂದಾ ಸ್ವರ್ಣವಲ್ಲೀ‌ ಮಹಾ‌‌ಸಂಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಸಲಾಗುವ ನೃಸಿಂಹ ಜಯಂತಿ ಹಿನ್ನೆಲೆಯ ರಥೋತ್ಸವ ಭಕ್ತಿ ಭಾವದಲ್ಲಿ ಸೋಮವಾರ ಬೆಳಗಿನ‌ ಜಾವದ ವೇಳೆಗೆ ಸಂಪೂರ್ಣಗೊಂಡಿತು.

ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ಲಕ್ಷ್ಮೀನೃಸಿಂಹ ದೇವರ ರಥೋತ್ಸವು ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿ‌ ಹಾಗೂ ಶ್ರೀಆನಂದಬೋಧೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯಿತು.

ನಿರಂತರ ಧಾರ್ಮಿಕ ಕಾರ್ಯ:
ಕಲ್ಪೋಕ್ತ ಮಹಾ ಪೂಜೆ,
10: 30 ರಿಂದ ಮಹಾ ಮಂಗಳಾರತಿ,
12 ಗಂಟೆಗೆ ಮಹಾರಥೋತ್ಸವಕ್ಕೇ ದೇವರನ್ನು ಪಲ್ಲಕ್ಕಿಯ ಮೇಲೆ ಮೆರವಣಿಗೆಯ ಮೂಲಕ ಚಂಡೆ, ವೇದಘೋಷ, ವಾಲಗಗಳ ಮೂಲಕ ಒಯ್ದು ತಡರಾತ್ರಿ 12:45ಕ್ಕೆ ಮಹಾರಥದಲ್ಲಿ ದೇವರ ಸ್ಥಾಪನೆ ನಡೆಯಿತು.
ರಥ ಬೀದಿಯಲ್ಲಿ ಸಿಂಗಾರಗೊಂಡ ರಥದಲ್ಲಿ ಶ್ರೀದೇವರನ್ನು ರಥಾರೂಢಗೊಳಿಸುವಾಗ
ಭಕ್ತರು ಹರ್ಷೊದ್ಘಾರ‌ ನಡೆಸಿದರು. ಶ್ರೀಗಳ ಕರಕಮಲಗಳಿಂದ ಪೂಜೆ ನಡೆಯಿತು. ರಥದ ಗಾಲಿ‌ಪೂಜೆ, ರಥ ಕಾಣಿಕೆ‌ ಸಲ್ಲಿಕೆ ಬಳಿಕ ನಡು ರಾತ್ರಿ 1 ಗಂಟೆ ವೇಳೆಗೆ ಭಕ್ತರಿಂದ ರಥ ಎಳೆಯುವ ಕಾರ್ಯಕ್ರಮ ನಡೆಯಿತು. ಯತಿಗಳು‌ ರಥವನ್ನು ಅನುಸರಿಸಿ ಸಾಗಿದರು. ರಥವೇರಿದ ಭಗವಂತ ಆಗಮಿಸುವ ದೃಶ್ಯವನ್ನು ಭಕ್ತರು ಇಕ್ಕೆಲದಲ್ಲಿ‌ ನಿಂತು ಕಣ್ತುಂಬಿಕೊಂಡರು.

ರಥೋತ್ಸವದ ಬಳಿಕ ಅಷ್ಟಾವಧಾನ ಸೇವೆಯನ್ನು ಸ್ವೀಕರಿಸಿ ದೇವರು ಮತ್ತೆ ಗರ್ಭಗುಡಿಗೆ ೨:೩೦ರ ಪ್ರವೇಶಿಸಿದನು.
ಶ್ರೀಮಠದಲ್ಲಿ ಮುಂಜಾನೆ ನೃಸಿಂಹ ಹವನ, ಇತರ ಪೂಜೆಗಳು‌ ಕೂಡ ನಡೆದವು. ಏ.೩೦ರಿಂದಲೇ ರಥೋತ್ಸವದ ಸಂಬಂಧಿ ಧಾರ್ಮಿಕ ಕಾರ್ಯಗಳು ಆರಂಭವಾಗಿದ್ದವು.

ಸರ್ವ ಧರ್ಮ ಸಮನ್ವಯ:ರಥದ ನಿರ್ಮಾಣ ಹಾಗೂ ರಥೋತ್ಸವದಲ್ಲಿ ರಥದ ಗಾಲಿ ನಿರ್ವಹಣೆಯನ್ನು ಮುಸ್ಲಿಂ
ಸಮುದಾಯದವರು ತಲ ತಲಾಂತರದಿಂದ ನಡೆಸಿಕೊಂಡು ಬಂದರೆ, ಪ್ರತಿ ವರ್ಷ ನಡೆಸುತ್ತಿದ್ದ ಸಿಡಿಮದ್ದು ಪ್ರದರ್ಶನದಲ್ಲಿ
ಕ್ರೈಸ್ತ ಕುಟುಂಬದ ವ್ಯಕ್ತಿ ನಿರ್ವಹಿಸುವದರಿಂದ ಈ ರಥೋತ್ಸವ ಭಾವೈಕ್ಯದ ರಥೋತ್ಸವ
ಎಂದೇ ಹೆಸರಾಗಿದೆ.
ರಥದ ನಿರ್ಮಾಣ ಕಾರ್ಯವನ್ನು ಹದಿನೈದು ದಿನಗಳ ಕಾಲ ಸೋಂದಾದ ಮುಸ್ಲಿಂ ‌ಸಮುದಾಯವದರು ಭಕ್ತಿ ಭಾವದಲ್ಲಿ ನಡೆಸಿಕೊಂಡು ಬಂದಿದ್ದೂ ರಥೋತ್ಸವದ ಯಶಸ್ಸಿಗೆ ಸಹಕಾರಿ ಆಯಿತು.
ಇನ್ನು‌ ರಥೋತ್ಸವದ ಬಳಿಕ ರಾತ್ರಿ ಯಕ್ಷ ಶಾಲ್ಮಲಾ ಸ್ವರ್ಣವಲ್ಲೀ ನೇತೃತ್ವದಲ್ಲಿ ಹೆಸರಾಂತ ಕಲಾವಿದರಿಂದ ” ಕಂಸ ದಿಗ್ವಿಜಯ -ಕಂಸ ವಧೆ “ಯಕ್ಷಗಾನ ಬಯಲಾಟ ನಡೆಯಿತು. ನಾಗರಾಜ ಜೋಶಿ‌ ಸೋಂದಾ ಸಂಯೋಜಿಸಿದ್ದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಕಾರ್ಯದರ್ಶಿ ಜಿ.ವಿ.ಹೆಗಡೆ ಗೊಡವೆಮನೆ ಇತರರು ಇದ್ದರು.

ಬಾಕ್ಸ
ಯುದ್ಧದ ಹಿನ್ನೆಲೆ: ಸಿಡಿಮದ್ದಿಲ್ಲ!
ಭಾರತ ಪಾಕಿಸ್ತಾನದ ನಡುವಿನ ಯುದ್ಧದ‌ ಕಾರಣದಿಂದ ನೃಸಿಂಹ ದೇವರ ರಥೋತ್ಸವ ವೇಳೆ ಸುಡು‌ಮದ್ದು ಪ್ರದರ್ಶನ ಕೈ ಬಿಡಲಾಗಿದೆ.
ಸ್ವರ್ಣವಲ್ಲೀಯ ಗುರುಗಳ ಸೂಚನೆಯ‌ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ. ಪ್ರತೀ ವರ್ಷ ಅಂಕೋಲಾದ ಕ್ರೈಸ್ತ‌ ಸಮುದಾಯದವರು‌ ಈ ಸೇವೆ ಸಲ್ಲಿಸುತ್ತಿದ್ದರು. ರಥೋತ್ಸವದ ‌ಸಂಭ್ರಮಕ್ಕೆ ಇದು ಮೆರಗಾಗುತ್ತಿತ್ತು. ಹತ್ತಾರು‌ ಸಾವಿರ ಭಕ್ತರ ಹರ್ಷೋದ್ಘಾರಕ್ಕೂ ಕಾರಣವಾಗುತ್ತಿತ್ತು. ಈ ಮಧ್ಯೆ ಶ್ರೀಗಳು ಯುದ್ಧದಲ್ಲಿ ಭಾರತದ ವಿಜಯ ಪ್ರಾಪ್ತಿ ಹಾಗೂ ಸೈನಿಕರ ರಕ್ಷಣೆಗೂ ವಿಶೇಷವಾಗಿ ಪ್ರಾರ್ಥಿಸಿದರು. ಶ್ರೀಗಳವರ ಸೂಚನೆಯ ಮೇರೆಗೆ ರಥೋತ್ಸವದ ಮಹಾಸಂಕಲ್ಪವು ಇದನ್ನೂ ಒಳಗೊಂಡಿತ್ತು..

ಬಿಡುವಿಲ್ಲದ ಕಾರ್ಯ
ಇನ್ನು‌ ಸ್ವರ್ಣವಲ್ಲೀ ಮಠದ ಗುರುಗಳ ಪರಂಪರೆಯಲ್ಲಿ ನಿತ್ಯ ಅನುಷ್ಠಾನವೂ ಹೆಚ್ಚು. ನೃಸಿಂಹ‌ ಜಯಂತಿಗೆ ಬಿಡುವೇ ಇಲ್ಲದಷ್ಟು ಧಾರ್ಮಿಕ ಕಾರ್ಯಕ್ರಮಗಳು. ಈ‌ ಮಧ್ಯೆ ಎರಡು ದಿನಗಳ ಕೃಷಿ ಜಯಂತಿ. ಈ ಒತ್ತಡಗಳ‌ ಮಧ್ಯೆಯೂ ವಿಶ್ರಾಂತಿ‌ ಮಾಡದೇ ಧಾರ್ಮಿಕ ಹಾಗೂ ಸಾಮಾಜಿಕ ಬದ್ಧತೆಯ ದ್ಯೋತಕವಾಗಿ ಶ್ರೀಗಳು ಕಂಡು ಬಂದರು. ಶ್ರೀ ದೇವರ ಕೈಂಕರ್ಯದಲ್ಲಿ ನಿಷ್ಠೆಯಲ್ಲಿ ತೊಡಗಿಕೊಂಡ ಶ್ರೀಗಳು ನಮ್ಮ ಭಾಗ್ಯ ಎಂಬ ಭಕ್ತಿಯ ಉದ್ಘಾರ ಶಿಷ್ಯರಲ್ಲಿ ವ್ಯಕ್ತವಾದವು.