ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಗ್ರಾಮ ಪಂಚಾಯತ ವ್ಯಾಪ್ತಿಯ ಗಾವಡೆವಾಡಾದ ಕೃಷ್ಣ ಗಾವಡಾರವರ ಇರಪಡ್ ದಲ್ಲಿರುವ ಭತ್ತದ ಗದ್ದೆಯ ಒಕ್ಕಣೆಯ ಕಣದಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಭತ್ತದ ಗದ್ದೆಯಲ್ಲಿರುವ ಪೈರಿನ ತೆನೆಯನ್ನು ತಂದು ಬಣವೆ ಹಾಕಿದ ನಂತರ ಅದನ್ನು ಒಕ್ಕಣೆಯ ನಂತರ ಭತ್ತವನ್ನು ಕಣದಿಂದ ಮನೆಗೆ ಒಯ್ಯುವ ಮೊದಲು ಪುರೋಹಿತರನ್ನು ಕರೆದು ಶ್ರೀ ಸತ್ಯನಾರಾಯಣ ದೇವರ ಪೂಜೆಯನ್ನು,ಹುಲ್ಲಿನಿಂದ ನಿರ್ಮಿಸಿದ ಚಪ್ಪರದ ಬಾಳೆಗಿಡದ ಮಂಟಪದಲ್ಲಿ ಹೂವು, ಹಣ್ಣು,ಕಾಯಿಗಳೊಂದಿಗೆ ನೆರವೇರಿಸಿ,ಆರತಿ,ತೀರ್ಥ ಪ್ರಸಾದ ವಿತರಣೆಯ ಕಾರ್ಯಕ್ರಮ ನಡೆಯಿತು. ಈ ಒಂದು ಸಂಪ್ರದಾಯವನ್ನು ಹಿರಿಯರ ಮಾರ್ಗದರ್ಶನದಲ್ಲಿ ಕೃಷ್ಣ ಗಾವಡಾ ಕುಟುಂಬದವರು ಸುಮಾರು ವರ್ಷಗಳಿಂದ ನಡೆಸುತ್ತಾ ಬಂದಿರುತ್ತಾರೆ. ಈ ಸಂದರ್ಭದಲ್ಲಿ ಮಧ್ಯಾಹ್ನದಿಂದ ರಾತ್ರಿಯ ತನಕ ನೂರುಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ತೀರ್ಥ ಪ್ರಸಾದ, ಅನ್ನಸಂತರ್ಪಣೆಯ ಕಾರ್ಯಕ್ರಮದಲ್ಲಿ ಕುಟುಂಬದವರು, ಆಪ್ತರು, ನೆಂಟರು,ಹಿತೈಷಿಗಳು ಭಾಗಿಯಾಗಿದ್ದರು.
ತಾಲೂಕಿನ ಕೆಲವು ಭಾಗಗಳಲ್ಲಿ ಹಿರಿಯರು ತೋರಿದ ಈ ಸಂಪ್ರದಾಯವನ್ನು ಇದುವರೆಗೂ ಕಾಣಬಹುದಾಗಿದೆ.
