ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ-ಸದಾಶಿವಗಡ ರಾಜ್ಯ ಹೆದ್ದಾರಿಯ ಮಾರ್ಗವಾಗಿ ಸಂಚರಿಸುವ
ಕುಮಟಾ- ಕೊಲ್ಲಾಪುರ ಸಾರಿಗೆ ಬಸ್ ಅಣಶಿ ಬಳಿಯ ಬಾಡಪೋಲಿಯ ಹತ್ತಿರ ಕೆಟ್ಟು ನಿಂತಿದೆ. ಈ ರಾಜ್ಯ ಹೆದ್ದಾರಿಯ ಬೃಹದಾಕಾರದ ಹೊಂಡಗಳ ದುರವಸ್ಥೆಯಿಂದ ಪ್ರತಿದಿನವೂ ಅನೇಕ ಪ್ರಯಾಣಿಕರಿಗೆ ಬೆನ್ನು–ಸೊಂಟ ನೋವುಗಳಿಗೆ ಒಳಗಾಗುತ್ತಿದ್ದಾರೆ.

ಜನರು ಸಂಬಂಧಿಸಿದ ಇಲಾಖೆಗೆ ಎಷ್ಟು ದೂರು ಕೊಟ್ಟರೂ, ಎಷ್ಟು ಶಾಪ ಹಾಕಿದರೂ, ಯಾರಿಗೂ ಇದರ ಬಿಸಿ ತಟ್ಟಲಿಲ್ಲ,ಜನರ ಪರದಾಟ ತಪ್ಪಿಲ್ಲ.
ಸರ್ಕಾರಕ್ಕೆ ಸಾರ್ವಜನಿಕರ ಕೂಗು,ಮನವಿ,ಆಗ್ರಹ ಕೇಳಿಸುತ್ತಿಲ್ಲವೇ ಎಂಬ ಪ್ರಶ್ನೆ ಜನರ ಬಾಯಲ್ಲಿ ಕೇಳಿಬರುತ್ತಿದೆ. ಜನರ ಸಹನೆಯನ್ನು ಸರ್ಕಾರ ಪರೀಕ್ಷಿಸುತ್ತಿದೆ ಎಂಬ ಭಾವನೆ ಮೂಡುತ್ತಿದೆ.
ಈ ರಸ್ತೆಯಲ್ಲಿ ಶಾಲಾ ಮಕ್ಕಳು, ವಯೋವೃದ್ಧರು, ಗರ್ಭಿಣಿಯರು, ಬಾಣಂತಿಯರು ಪ್ರತಿದಿನವೂ ತೊಂದರೆ ಅನುಭವಿಸುತ್ತಿದ್ದಾರೆ. ಬಹುಪಯೋಗಿ ರಸ್ತೆಯಾಗಿರುವ ಕೈಗಾ ಅಣು ವಿದ್ಯುತ್ ಸ್ಥಾವರ ಮತ್ತು ಕದ್ರಾ ಜಲ ವಿದ್ಯುತ್ ಸ್ಥಾವರಗಳಿಗೆ ಭಾರೀ ಸರಕು ಸಾಗಾಣಿಕೆ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ. ಆದರೆ ಸಾಮಾನ್ಯ ಜನರು ಬಳಸುವ ರಸ್ತೆ ಮಾತ್ರ ಹಾಳಾಗಿ ದುರ್ಬಳಕೆಗೆ ಒಳಗಾಗಿದೆ.

ರಸ್ತೆ ದುರಸ್ತಿ ಕೋರಿ ವರ್ಷಕ್ಕೊಮ್ಮೆ ಅಲ್ಲ, ಕನಿಷ್ಠ ಮೂರ್ನಾಲ್ಕು ಬಾರಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಜನರ ಹೋರಾಟ ಮುಂದುವರಿದರೂ, ಸಾರಿಗೆ ಬಸ್ ಗಳು ಮಾತ್ರ ಹೀಗೆಯೇ ಮಾರ್ಗ ಮಧ್ಯದಲ್ಲಿ ನಿಂತು ಜನರನ್ನು ಅನಿವಾರ್ಯ ಸಂಕಷ್ಟಕ್ಕೆ ತಳ್ಳುತ್ತಿದೆ.