ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ ಕುಂಬಾರವಾಡಾ ಶೈಕ್ಷಣಿಕ ಜಿಲ್ಲೆ ಶಿರಸಿ(ಉ.ಕ)ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ,ಕುಂಬಾರವಾಡಾ ಇವರ ಸಂಯುಕ್ತಾಶ್ರಯದಲ್ಲಿ ಕುಂಬಾರವಾಡಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ 2025-26 ರ ಕಾರ್ಯಕ್ರಮ ದಿನಾಂಕ:21-11-2025 ರ ಶುಕ್ರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಬಾರವಾಡಾದಲ್ಲಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಕುಂಬಾರವಾಡಾ ಸಹ ಶಿಕ್ಷಕಿಯಾದ ಸಂಪದಾ ನಾಯ್ಕ ವೇದಿಕೆಗೆ ಗಣ್ಯರನ್ನು ಆಹ್ವಾನಿಸಿದರು.ನಂತರ ಶಾಲೆಯ ವಿದ್ಯಾರ್ಥಿನಿಯರು ಸ್ವಾಗತ ಗೀತೆಯನ್ನು ಆಂಗ್ಲ ಭಾಷೆಯಲ್ಲಿ ಸುಶ್ರಾವ್ಯವಾಗಿ ಹಾಡುವ ಮೂಲಕ ಸ್ವಾಗತಿಸಿದರು. ಕಾರ್ಯಕ್ರಮದ ಅತಿಥಿ ಗಣ್ಯರನ್ನು ಕಾಗದದಿಂದ ತಯಾರಿಸಿದ ಹೂಗುಚ್ಛದ ಜೊತೆಗೆ ಪೆನ್ನನ್ನು ವಿದ್ಯಾರ್ಥಿಗಳಿಂದ ನೀಡುವ ಮೂಲಕ ಸ್ವಾಗತಿಸಿ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದ ಕುಂಬಾರವಾಡಾ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಭಾಸ್ಕರ ಗಾಂವ್ಕರವರು ಇಲಾಖೆಯ ವಾರ್ಷಿಕ ನಿಯಮಾವಳಿಯಂತೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಈ ಸಂದರ್ಭದಲ್ಲಿ ಕುಂಬಾರವಾಡಾ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಹಳಿಯಾಳ ಜೋಯಿಡಾ ಕ್ಷೇತ್ರದ ಶಾಸಕರಾದ ಆರ್.ವಿ.ದೇಶಪಾಂಡೆಯವರು, ಗ್ರಾಮ ಪಂಚಾಯತ ಉಪಾಧ್ಯಕ್ಷ ಪ್ರವೀಣ ನಾಯ್ಕ,ತಾಲೂಕಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಮಂಗೇಶ ಕಾಮತ್,ಸ್ಥಳೀಯ ಗ್ರಾಮ ಪಂಚಾಯತ ಸೇರಿದಂತೆ ಇನ್ನಿತರ ಗಣ್ಯರು ನೀಡಿದ ಕೊಡುಗೆಯನ್ನು ಸ್ಮರಿಸಿ ಇಲಾಖೆಯ ಪರವಾಗಿ ಎಲ್ಲರಿಗೂ ಅಭಿನಂದಿಸಿದರು. ಬಿ.ಆರ್.ಪಿ ಗಳಾದ ಶಶಿಕಾಂತ ಹೂಲಿ ಮಾತನಾಡಿ ಪ್ರತಿಭಾ ಕಾರಂಜಿ ವೇದಿಕೆಯು ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಪ್ರದರ್ಶಿಸಲು ಇರುವಂತಹ ವೇದಿಕೆ.ಪ್ರತಿಭಾ ಪ್ರದರ್ಶನಕ್ಕೆ ಸಿದ್ಧರಾಗಿರುವ ಮಕ್ಕಳ ಉತ್ಸಾಹ,ಪ್ರೋತ್ಸಾಹ ನೋಡಿ ತುಂಬಾ ಖುಷಿಯಾಗುತ್ತಿದೆ. ಎಲ್ಲರೂ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಯಶಸ್ಸಿನ ಮೆಟ್ಟಲ್ಲನ್ನು ಏರಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಬರಲು ಇರುವಂತಹ ಒಂದು ವೇದಿಕೆ.ಪ್ರತಿಭಾ ಕಾರಂಜಿ ಕಾರ್ಯಕ್ರಮ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇರುವಂತಹ ಅವಕಾಶ. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ.ಅದನ್ನು ಹೊರತರಲು ಸರಿಯಾದ ವೇದಿಕೆ, ಅವಕಾಶ, ಪ್ರೋತ್ಸಾಹ ಅಗತ್ಯ. ಪ್ರತಿಭೆ ಬೆಳಗಲು ಶಿಕ್ಷಕರ ಜೊತೆ ಪೋಷಕರ ಶ್ರಮವು ಮುಖ್ಯ.ಪ್ರತಿಭೆಯನ್ನು ಶಿಕ್ಷಕರ ಜೊತೆ ಪಾಲಕರು ಪ್ರೋತ್ಸಾಹಿಸಬೇಕು.ಪ್ರತಿಭೆ ದೇವರು ಕೊಟ್ಟ ವರ,ಅದು ದೇವರ ಕೊಡುಗೆ,ಪ್ರತಿಭೆ ಯಾರ ಸೊತ್ತಲ್ಲ,ಅದನ್ನು ಬೆಳಗಲು ಶಿಕ್ಷಕರ ಹಾಗೂ ಪೋಷಕರ ಶ್ರಮ ಮಹತ್ವದ್ದಾಗಿದೆ. ಸರ್ಕಾರವು ಶೈಕ್ಷಣಿಕ ಪ್ರಗತಿಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ,ಕೇವಲ ಶಿಕ್ಷಣ ಇಲಾಖೆಯಿಂದ ಮಾತ್ರ ಪ್ರಗತಿಯಾಗದೇ ಸಮುದಾಯದ ಸಹಭಾಗಿತ್ವ ಮುಖ್ಯ.ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮದ ವೇದಿಕೆಯ ಮೂಲಕ ಅನೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಿ ಒಳ್ಳೇಯ ನಾಗರೀಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭೆಗಳು ಭವಿಷ್ಯವನ್ನು ರೂಪಿಸುವ ಶಕ್ತಿಗಳಾಗಲು ನಾವೆಲ್ಲರೂ ಪ್ರೋತ್ಸಾಹ ನೀಡಬೇಕಾಗಿದೆ. ವಿದ್ಯಾರ್ಥಿನಿಗಳು ಪಠ್ಯ,ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಕಾತೇಲಿ (ಕುಂಬಾರವಾಡಾ)ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಪ್ರವೀಣ(ದತ್ತಾ)ನಾಯ್ಕ, ಅಧ್ಯಕ್ಷತೆಯನ್ನುವಹಿಸಿದ್ದ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಂಜಿತ್ ದೇಸಾಯಿ,ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು,ವಿವಿಧ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಪದಾಧಿಕಾರಿಗಳು,ಸಾಮಾಜಿಕ ಕಾರ್ಯಕರ್ತರಾದ ಪ್ರಸನ್ನ ಗಾವಡಾ,ರವಿ ಡೇರೆಕರ,ಗುಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜೋಸಫ್ ಸರ್ ಇನ್ನಿತರ ಗಣ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕೊನೆಯಲ್ಲಿ ಸಹ ಶಿಕ್ಷಕಿಯಾದ ಸಪ್ನಾ ಖಾರ್ವಿಯವರು ಅತಿಥಿ ಗಣ್ಯರನ್ನು ಹೃದಯ ಪೂರ್ವಕವಾಗಿ ಅಭಿನಂದಿಸಿದರು.
