ಸುದ್ದಿ ಕನ್ನಡ ವಾರ್ತೆ

ಅಂಕೋಲಾ : ತಾಲೂಕಿನ ಅಗಸೂರು ಕಂಚಿನ ಬಾಗಿಲು ಬಳಿ ಮಿಥೆನೆಲ ಗ್ಯಾಸ್ ತುಂಬಿಕೊಂಡು ಸಂಚರಿಸುತ್ತಿದ್ದ ಟ್ಯಾಂಕರ್ ಇಂದು ಮಧ್ಯಾಹ್ನ ಪಲ್ಟಿಯಾಗಿದ್ದು, ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಘಟನೆಯ ನಂತರ ಅಂಕೋಲಾ–ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಯಿತು. ಯಾವುದೇ ಅನಾಹುತ ಸಂಭವಿಸದಿದ್ದರೂ, ಸುರಕ್ಷತೆಯ ದೃಷ್ಟಿಯಿಂದ ಸ್ಥಳಕ್ಕೆ ಸಾರ್ವಜನಿಕರ ಒಡಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಗುಜರಾತಿನ ಕಲೋಜನಿಂದ ಹೆಬ್ರಿ ವಿಶ್ವಾಸ ನಗರಕ್ಕೆ ಬರುತ್ತಿದ್ದ ಈ ಲಾರಿಯು ಚಾಲಕ ಪಾನಪತ್ತನಾಗಿ ಚಾಲನೆ ಮಾಡಿ ಈ ಅವಘಡಕ್ಕೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ಅಂಕೋಲಾ ತಹಶಿಲ್ದಾರ ಡಾ.ಚಿಕ್ಕಪ್ಪ ನಾಯಕ, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ ಧಾವಿಸಿ ಪರಿಶೀಲನೆ ನಡೆಸಿದೆ , ಪರಿಸರದಲ್ಲಿ ಮಿಥೇನಲ್ ಗ್ಯಾಸ್ ಸೋರಿಕೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಕಾರ್ಯ ಮುಂದುವರೆದಿದೆ. ಉಡಪಿಯಿಂದ ಕಂಪನಿಯ ತಾಂತ್ರಿಕ ಸಿಬ್ಬಂದಿ ಆಗಮಿಸಿದ ಮೇಲೆ , ಟ್ಯಾಂಕರ್ ಅನ್ನು ಸಂಪೂರ್ಣ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಸಂಚಾರಕ್ಕೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಯಲ್ಲಾಪುರದಿಂದ ಅಂಕೋಲಾ ಹಾಗೂ ಅಂಕೋಲಾದಿಂದ ಯಲ್ಲಾಪುರ ಪ್ರಯಾಣಿಸುವ ವಾಹನಗಳಿಗೆ ಬದಲಿ ಮಾರ್ಗ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸಕಂಬಿ–ಹಿಲ್ಲೂರು ಹಾಗೂ ಅಗಸೂರು–ಕೊಡ್ಸಣಿ ಮಾರ್ಗಗಳ ಮೂಲಕ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.