ಸುದ್ದಿ ಕನ್ನಡ ವಾರ್ತೆ
​ಶಿರಸಿ: ಹಣ-ಪ್ರತಿಷ್ಠೆಯಿಂದಲ್ಲ,ಶಿಷ್ಯರ ಮತ್ತು ಭಕ್ತರ ಅಚಲ ನಿಷ್ಠೆ, ಧರ್ಮಶ್ರದ್ಧೆ ಹಾಗೂ ಸಮರ್ಪಣಾಭಾವದಿಂದ ಮಠಗಳ ಪರಂಪರೆ ಉಳಿದು ಬೆಳೆದಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

​ಸ್ವರ್ಣವಲ್ಲೀ ಮಠದಲ್ಲಿ ವಿಜಯದಶಮಿ ಅಂಗವಾಗಿ ಆಶೀರ್ವಚನ ನೀಡಿದ ಅವರು, ಶರನ್ನವರಾತ್ರಿಯ ಒಂಬತ್ತು ದಿನಗಳ ಉತ್ಸವದಲ್ಲಿ ಚಂಡಿಕಾ ಸಪ್ತಶತಿ ಹಾಗೂ ದೇವಿ ಮಹಾತ್ಮೆಯ ಪಾರಾಯಣಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿತ್ತು. ಯಜ್ಞಗಳಿಗೆ ವಿಘ್ನ ಉಂಟಾದಾಗ ಧರ್ಮರಕ್ಷಣೆಗಾಗಿ ಭಗವತಿಯು ಅವತರಿಸಿ ಅಧರ್ಮದ ಶಕ್ತಿಗಳನ್ನು ಸಂಹರಿಸುವ ಸಂದೇಶವನ್ನು ದೇವಿ ಮಹಾತ್ಮೆ ಸಾರುತ್ತದೆ ಎಂದರು. ಉತ್ಸವಕ್ಕೆ ಶ್ರಮಿಸಿದ ಭಕ್ತರಿಗೆ ಜಗನ್ಮಾತೆ ಆಯುರಾರೋಗ್ಯ, ಕ್ಷೇಮ ಮತ್ತು ಅಭಿವೃದ್ಧಿ ಕರುಣಿಸಲಿ ಎಂದು ಆಶೀರ್ವದಿಸಿದರು.

​ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಠದ ಕಾರ್ಯಾಧ್ಯಕ್ಷ ಸತೀಶ ಗಜಾನನ ಹೆಗಡೆ ಹುಳಗೋಳ, ನಿಕಟಪೂರ್ವ ಅಧ್ಯಕ್ಷ ವಿಶ್ವೇಶ್ವರ ಎನ್. ಹೆಗಡೆ ಬೊಮ್ಮನಹಳ್ಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Banner Ad

​ವಿಜೃಂಭಣೆಯಿಂದ ಶರನ್ನವರಾತ್ರಿ ಸಂಪನ್ನ: ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ಶರನ್ನವರಾತ್ರಿ ಉತ್ಸವದಲ್ಲಿ ಶ್ರೀ ರಾಜರಾಜೇಶ್ವರಿ ದೇವಿಗೆ ವಿಶೇಷ ಅಲಂಕಾರ, ನವದುರ್ಗೆಯರ ಪೂಜೆ, ಶಾರದಾ ಸ್ಥಾಪನೆ, ಮಹಾಲಕ್ಷ್ಮಿ ಪೂಜೆ, ಶ್ರೀಚಕ್ರಾರ್ಚನೆ, ಚಂಡಿಕಾ ಸಪ್ತಶತಿ ಹಾಗೂ ವೇದ ಪಾರಾಯಣ, ಶತರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಭಜನೆ, ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮಗಳು ಜರುಗಿದವು.

​ವಿಜಯದಶಮಿಯಂದು ವಿದ್ಯಾರಂಭ, ಮಹಾಪೂಜೆ, ಸೀಮೋಲ್ಲಂಘನ, ಶಮೀಪೂಜೆ ಹಾಗೂ ಅಷ್ಟಾವಧಾನ ಸೇವೆ ನೆರವೇರಿದವು. ಅ. 21ರಂದು ನವಚಂಡಿ ಹವನ ಮತ್ತು ಲಕ್ಷ್ಮೀನೃಸಿಂಹ ಮಂತ್ರಹವನಗಳ ಪೂರ್ಣಾಹುತಿ, ಮಹಾಪ್ರಸಾದ ವಿತರಣೆಯೊಂದಿಗೆ ಉತ್ಸವ ಮುಕ್ತಾಯಗೊಂಡಿತು. ಸಹಸ್ರಾರು ಭಕ್ತರು ದೇವಿಯ ದರ್ಶನ ಪಡೆದು ಉಭಯ ಶ್ರೀಗಳ ಆಶೀರ್ವಾದ ಪಡೆದರು.
​ನದಿ ಜೋಡಣೆ ಯೋಜನೆಗಳ ಭೀತಿ ನಿವಾರಣೆಗೆ ಪ್ರಾರ್ಥನೆ: ಬೇಡ್ತಿ-ವರದಾ ಹಾಗೂ ಅಘನಾಶಿನಿ ನದಿ ಜೋಡಣೆ ಯೋಜನೆಗಳಿಂದ ಈ ಭಾಗದ ಜನರಲ್ಲಿ ಆತಂಕವಿದೆ. ಈ ಯೋಜನೆಗಳ ಭೀತಿಯಿಂದ ಜನರನ್ನು ಮುಕ್ತಗೊಳಿಸಿ ಶಾಶ್ವತ ಪರಿಹಾರ ದೊರಕುವಂತೆ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಪ್ರಾರ್ಥನಾ ಶ್ಲೋಕಗಳನ್ನು ರಚಿಸಿ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.