Banner Ad

ಸುದ್ದಿ ಕನ್ನಡ ವಾರ್ತೆ

ಶಿರಸಿ: ಆರು ಬಾರಿ ಶಾಸಕರಾಗಿ, ಸಚಿವರಾಗಿ, ವಿಧಾನಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವಿ ಸಂಸದರು ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಜವಾಬ್ದಾರಿ ಅರಿತುಕೊಳ್ಳಬೇಕು. ಮನೆ ನಂಬರ್‌ ರದ್ದಾಗುತ್ತದೆ ಎಂದು ಗ್ರಾಪಂಗಳಿಗೆ ತೆರಳಿ ಜನರಲ್ಲಿ ಆತಂಕ ಸೃಷ್ಟಿಸುವ ಬದಲು, ಅತಿಕ್ರಮಣ ಜಮೀನು ಸಕ್ರಮಗೊಳಿಸಲು ಸಂಸತ್ತಿನಲ್ಲಿ ಧ್ವನಿ ಎತ್ತಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ ಜನರಿಗೆ ನೆರವಾಗಲಿ ಎಂದು ಶಾಸಕ ಭೀಮಣ್ಣ ನಾಯ್ಕ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸವಾಲು ಹಾಕಿದರು.

Banner Ad

ನಗರದ ಸುಪ್ರಿಯಾ ಹೊಟೆಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿರುವ ಮನೆಗಳ ಆಸ್ತಿ ತೆರಿಗೆ ಮತ್ತು ಇ-ಸ್ವತ್ತು ವಿಚಾರವಾಗಿ ಹೊರಡಿಸಿದ್ದ ಸುತ್ತೋಲೆಗೆ ತಾತ್ಕಾಲಿಕ ತಡೆ ನೀಡುವಂತೆ ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರ ಗಮನಕ್ಕೆ ತರಲಾಗಿತ್ತು. ಅದರಂತೆ ಸುತ್ತೋಲೆಗೆ ತಡೆ ನೀಡಿರುವುದಾಗಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ಅನಗತ್ಯ ಭಯ ಹುಟ್ಟಿಸುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.

ಶಾಸಕ ಶಿವರಾಮ ಹೆಬ್ಬಾರ್ ಅವರೊಂದಿಗೆ ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ಸಮಸ್ಯೆಯ ಗಂಭೀರತೆಯನ್ನು ವಿವರಿಸಿದ್ದೇವೆ. ಸುತ್ತೋಲೆಯನ್ನು ಹಿಂಪಡೆಯುವಂತೆ ಲಿಖಿತವಾಗಿಯೂ ಮನವಿ ಮಾಡಿದ್ದೇವೆ. ಎರಡು ದಿನಗಳ ಹಿಂದೆ ನಡೆದ ಭೇಟಿಯಲ್ಲಿ ಸುತ್ತೋಲೆಗೆ ತಡೆ ನೀಡಿರುವುದಾಗಿ ತಿಳಿಸಿ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿರುವಾಗ, ಜನರ ನಡುವೆ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದರು.
ಆರು ಬಾರಿ ಶಾಸಕರಾಗಿ, ಸಚಿವರಾಗಿ, ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಸಂಸದರು ಈ ಸಮಸ್ಯೆಯನ್ನು ಸಂಸತ್ತಿನ ತಕ್ಷಣದ ಅಧಿವೇಶನದಲ್ಲೇ ಪ್ರಸ್ತಾಪಿಸಿ ಬದಲಾವಣೆಗೆ ಪ್ರಯತ್ನಿಸಬಹುದಿತ್ತು. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸಂಬಂಧಿಸಿದ ಅರಣ್ಯ ಭೂಮಿಯ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಂಸತ್ತಿನಲ್ಲಿ ಮಾತನಾಡಲು ಆಗಲಿಲ್ಲವೇ? ಜನರ ಮನೆಗಳಿಗೆ ಹಕ್ಕು ಸಿಗುವಂತೆ ಮಾಡುತ್ತೇನೆ ಎಂದು ಜವಾಬ್ದಾರಿಯುತವಾಗಿ ಹೇಳುವ ಬದಲು, ಪಂಚಾಯ್ತಿಗಳಿಗೆ ತೆರಳಿ ಪ್ರತಿಭಟನೆ ನಡೆಸಿ ಜನರಲ್ಲಿ ಆತಂಕ ಮೂಡಿಸುವುದು ಯಾವ ರೀತಿಯ ಜನಪರ ಕಾಳಜಿ ಎಂದು ಪ್ರಶ್ನಿಸಿದರು.
ಜನರ ಸಮಸ್ಯೆ ಯಾರ ಜವಾಬ್ದಾರಿ ಎಂಬುದನ್ನು ಪರಸ್ಪರರ ಮೇಲೆ ಹೊರಿಸುವುದರಿಂದ ಪ್ರಯೋಜನವಿಲ್ಲ. ಅತಿಕ್ರಮಣದಾರರ ಸಮಸ್ಯೆ ದಶಕಗಳಿಂದ ಮುಂದುವರಿದಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಕ್ಕುಪತ್ರ ನೀಡುವ ಪ್ರಯತ್ನಗಳಾಗಿವೆ. ಅರಣ್ಯ ಭೂಮಿಗೆ ಸಂಬಂಧಿಸಿದ ಕಾನೂನು ಮತ್ತು ರಾಜ್ಯ ಸರ್ಕಾರದ ಅಧಿಕಾರದ ಮಿತಿಗಳನ್ನೂ ಗಮನದಲ್ಲಿಟ್ಟುಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ 50 ಸಾವಿರ ನಿವೇಶನಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಂದಾಯ ಭೂಮಿ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದರು.
ಬೆಡ್ತಿ–ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕೆಂಬ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಭೀಮಣ್ಣ ನಾಯ್ಕ ಸ್ಪಷ್ಟಪಡಿಸಿದರು.

ಪ್ರಸ್ತುತ ಸಣ್ಣ ನದಿಗಳು, ಹೊಳೆಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದೆ. ಗುಂಡಿಗಳಲ್ಲಿಯೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಮಾತ್ರವಲ್ಲದೆ ಜಾನುವಾರು ಹಾಗೂ ವನ್ಯಜೀವಿಗಳಿಗೂ ನೀರಿನ ಕೊರತೆ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ನದಿ ಜೋಡಣೆ ಯೋಜನೆ ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ. ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬರ ಘೋಷಣೆ ಮಾಡುವ ಅಗತ್ಯವನ್ನೂ ಪರಿಶೀಲಿಸಬೇಕು. ನದಿ ಜೋಡಣೆ ವಿರೋಧಿ ಹೋರಾಟದಲ್ಲಿ ತಾವು ಸಕ್ರಿಯವಾಗಿ ಭಾಗವಹಿಸಲಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಹೋರಾಟದ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೂ ಮತ್ತೆ ವಾಸ್ತವಾಂಶಗಳನ್ನು ತರಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷೆ ಸುಮಾ ಉಗ್ರಾಣಕರ, ಎಸ್.ಕೆ. ಭಾಗ್ವತ, ಅಬ್ಬಾಸ್ ತೋನ್ಸೆ, ದೇವರಾಜ ಮರಾಠಿ, ಶ್ರೀಪಾದ ಹೆಗಡೆ ಕಡವೆ ಮತ್ತಿತರರು ಉಪಸ್ಥಿತರಿದ್ದರು.

Banner Ad