ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನಲ್ಲಿ ಬುಧವಾರ ಮಳೆ ಜೋರಾಗಿದ್ದು, ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಆದರೆ ಪಟ್ಟಣದಲ್ಲಿ ಮಾತ್ರ ಮಳೆ ಪ್ರಮಾಣ ಕಡಿಮೆಯಾಗಿದೆ.
ನಿರಂತರ ಮಳೆಯಿಂದಾಗಿ ತಾಲೂಕಿನ ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 52 ರ ಮೇಲೆ ಎರಡು ಕಡೆಗಳಲ್ಲಿ ಅಲ್ಪಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದಿದೆ. ಪ್ರತಿ ವರ್ಷ ಮಳೆ ಜೋರಾದಾಗ ಕುಸಿಯುವ ಸ್ಥಳದಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದು ರಸ್ತೆಯ ಮೇಲೆ ಬಿದ್ದಿದೆ. ಸಮೀಪದಲ್ಲೇ ಮತ್ತೊಂದೆಡೆ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ರಸ್ತೆಯ ಒಂದು ಬದಿಯಲ್ಲಿ ಮಾತ್ರ ಮಣ್ಣು ಕುಸಿದಿರುವುದರಿಂದ ಒಂದು ಭಾಗದಿಂದ ವಾಹನಗಳ ಸಂಚಾರಕ್ಕೆ ಅವಕಾಶವಿತ್ತು.
ರಾಷ್ಟ್ರೀಯ ಹೆದ್ದಾರಿ ಸೂಪರ್ ವೈಸರ್ ಮುರುಗೆಶ ಶೆಟ್ಟಿ ನೇತೃತ್ವದಲ್ಲಿ ಮಣ್ಣು ತೆರವುಗೊಳಿಸಿ, ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಕಳೆದ ಕೆಲವು ದಿವಸಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮಳೆ ಇನ್ನೂ ಜೋರಾದಲ್ಲಿ ಇನ್ನಷ್ಟು ಮಣ್ಣು ಕುಸಿಯುವ ಅಪಾಯವಿದೆ. ಅರಬೈಲ್ ಘಟ್ಟ ಪ್ರದೇಶದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಗುಡ್ಡ ಕುಸಿತ ಸಾಮಾನ್ಯ. ಕಳೆದ ಮೂರು ವರ್ಷಗಳ ಹಿಂದೆ ಜೋರಾದ ಮಳೆಯಿಂದ ಹೆದ್ದಾರಿ ಎರಡೂ ಭಾಗಗಳಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ ಸಮಸ್ಯೆಯಾಗಿತ್ತು. ಕೆಲ ದಿನಗಳ ಮಟ್ಟಿಗೆ ಭಾರಿ ವಾಹನಗಳ ಓಡಾಟವನ್ನೂ ಸ್ಥಗಿತಗೊಳಿಸಲಾಗಿತ್ತು. ಈ ಬಾರಿಯೂ ಮಳೆ ಜೋರಾದರೆ ದೊಡ್ಡ ಪ್ರಮಾಣದಲ್ಲಿ ಕುಸಿತ ಉಂಟಾಗುವ ಭೀತಿ ತಪ್ಪಿದ್ದಲ್ಲ.
