ಸುದ್ದಿ ಕನ್ನಡ ವಾರ್ತೆ

ದಾಂಡೇಲಿ:ನಗರದ ಸೇವಾ ಸಂಕಲ್ಪ ತಂಡ ಹಾಗೂ ಭಗತ್ ಸಿಂಗ್ ಯುವ ಬಳಗ ದಾಂಡೇಲಿ ಇವರ ಆಶ್ರಯದಲ್ಲಿ ನಗರದ ಜಿ.ಟಿ.&ಟಿ.ಸಿ ಕಾಲೇಜು, ಎಸ್.ಡಿ.ಎಂ ಆಸ್ಪತ್ರೆ ಧಾರವಾಡ ಮತ್ತು ದಾಂಡೇಲಿಯ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಅಂಬೇವಾಡಿಯಲ್ಲಿರುವ ಜಿಟಿಟಿಸಿ ಕಾಲೇಜಿನಲ್ಲಿ ದಿನಾಂಕ:23-03-2026 ರ ಸೋಮವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.

​ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜಿಟಿ&ಟಿಸಿ ಕಾಲೇಜಿನ ಪ್ರಾಚಾರ್ಯ ದತ್ತಾತ್ರಿ ಅವರು ಅತ್ಯಂತ ಪವಿತ್ರ ದಾನಗಳಲ್ಲಿ ರಕ್ತದಾನವು ಮಹತ್ವಪೂರ್ಣವಾಗಿದೆ. ಹಳೆಯ ರಕ್ತ ಹೋಗಿ ಹೊಸ ರಕ್ತ ಬರುವುದರಿಂದ ಹೊಸ ಆಲೋಚನೆಗಳು ಸೃಷ್ಟಿಯಾಗಿ ನವ ಚೈತನ್ಯ ಮೂಡುತ್ತದೆ. ರಕ್ತದಾನವು ಸದೃಢ ಆರೋಗ್ಯ ನಿರ್ವಹಣೆಗೂ ಬಹಳ ಉಪಯುಕ್ತವಾಗಿದೆ ಎಂದರು.

​ಶಿಬಿರದ ರೂವಾರಿ ಹಾಗೂ ಸೇವಾ ಸಂಕಲ್ಪ ತಂಡದ ಪ್ರಮುಖರು, ಸಾಮಾಜಿಕ ಕಾರ್ಯಕರ್ತರಾದ, ಉದ್ಯಮಿಗಳು, ರಕ್ತದಾನಿಗಳು, ಸುಧೀರ್ ಶೆಟ್ಟಿ ಅವರು ಮಾತನಾಡಿ ರಕ್ತವು ಮನುಷ್ಯನ ದೇಹದಲ್ಲಿರುವ ಒಂದು ಅದ್ಭುತ ಸೃಷ್ಟಿ. ಈ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ದಾನ ಮಾಡಿದರೆ ಮಾತ್ರ ಇನ್ನೊಬ್ಬರ ಜೀವ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸೇವಾ ಸಂಕಲ್ಪ ತಂಡ ಹಾಗೂ ಭಗತ್ ಸಿಂಗ್ ಯುವ ಬಳಗದ ಆಶ್ರಯದಲ್ಲಿ ಭಗತ್ ಸಿಂಗ್ ಸ್ಮರಣೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ಈ ವರ್ಷ 16ನೇ ರಕ್ತದಾನ ಶಿಬಿರವಾಗಿದೆ ಎಂದರು. ಸೇವಾ ಸಂಕಲ್ಪ ತಂಡ ಹಾಗೂ ಭಗತ್ ಸಿಂಗ್ ಯುವ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರ ಅವಿರತ ಶ್ರಮ ಮತ್ತು ನಗರದ ಜನತೆಯ ಸಹಕಾರ ಮತ್ತು ಪ್ರೋತ್ಸಾಹ ಸ್ಮರಣೀಯವಾಗಿದೆ ಎಂದು ಹೇಳಿ, ಈ ಶಿಬಿರಕ್ಕೆ ಸಹಯೋಗವನ್ನು ನೀಡಿದ ಜಿಟಿಟಿಸಿ ಕಾಲೇಜು, ಎಸ್.ಡಿ.ಎಂ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆಯ ರಕ್ತ ನಿಧಿ ಕೇಂದ್ರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
​ಈ ಸಂದರ್ಭದಲ್ಲಿ ಸೇವಾ ಸಂಕಲ್ಪ ತಂಡ ಹಾಗೂ ಭಗತ್ ಸಿಂಗ್ ಯುವ ಬಳಗದ ಅರ್ಜುನ ಗವಾಸ, ವಿನಯ ಹುಕ್ಕೇರಿ, ರಾಜೇಶ್ ಗುಜ್ಜರ್, ಪ್ರಕಾಶ್ ಗೋಣಿ, ಸುಮೇರ್ ಜೈನ್, ಪ್ರತಾಪ ರಜಪೂತ, ಮಹಾವೀರ್ ಚೋಪನ್ನವರ್, ಪ್ರಭು ಅರುಟಗಿ, ಸಾರ್ವಜನಿಕ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ನವೀನಕುಮಾರ್, ಪ್ರಿಯಾಂಕಾ ಶಿಂದೆ, ರುಕ್ಮಿಣಿ ಕಡೇಮನಿ, ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಶಾಂತ ಕುಮಾರಡಾ ಜಿತೇಶ, ಡಾ.ಪೂಜಾ, ಡಾ.ಹಿಬಾ, ಜಿಟಿ&ಟಿಸಿ ಕಾಲೇಜಿನ ವಾಸುದೇವ ಮಿರಾಶಿ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಒಟ್ಟು 144 ರಕ್ತದಾನಿಗಳು ರಕ್ತವನ್ನು ದಾನ ಮಾಡಿ ಶಿಬಿರದ ಯಶಸ್ಸಿಗೆ ಸಹಕರಿಸಿದರು.