ಸುದ್ದಿ ಕನ್ನಡ ವಾರ್ತೆ

ಶಿರಸಿ:ತಾಲೂಕಿನ ಮರ್ಲಮನೆಯ ಪ್ರೀತಿ ವಿನಾಯಕ ಹೆಗಡೆ ಎತ್ತರ ಜಿಗಿತ ಸ್ಪರ್ಧೆಯಲ್ಲಿ ರಾಷ್ಟ್ರಕ್ಕೆ ಮೂರನೇ ಸ್ಥಾನ ಪಡೆದು ರಾಜ್ಯಕ್ಕೆ,ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಸಾಧಿಸುವ ಚಲ, ಸಾಧನೆಯ ದಾರಿಯ ಪರಿಕ್ರಮ ನ್ಯೂನತೆಗಳನ್ನೆಲ್ಲ ಬದಿಗೊತ್ತುತ್ತದೆ ಎಂಬುದನ್ನು ತಾಲೂಕಿನ ಗ್ರಾಮೀಣ ಪ್ರದೇಶದ ಈ ಯುವತಿ ತೋರಿಸಿಕೊಟ್ಟಿದ್ದಾಳೆ. ಬಾಲ್ಕದಿಂದಲೂ ಎದುರಿಸಿದ ಶ್ರವಣ ದೋಷದ ಸಮಸ್ಯೆಯನ್ನು ನಿರ್ಲಕ್ಷಿಸಿ ಗುಜರಾತಿನ ಅಹಮದಾಬಾದನಲ್ಲಿ ನಡೆದ 10ನೇ ರಾಷ್ಟ್ರೀಯ ಡೆಫ್ ಸನ್ ಜ್ಯೂನಿಯರ್ ಮತ್ತು ಸೀನಿಯರ್ ಸ್ಪೋಟ್ಸ್ ಚಾಂಪಿಯನಶಿಪ್ ನಲ್ಲಿ ಈ ಸಾಧನೆ ಮಾಡಿದ್ದಾಳೆ.
ತಾಲೂಕಿನ ನೆಗ್ಗು ಗ್ರಾಪಂ ಮರ್ಲಮನೆಯ ದಿನಾಯಕ ಹೆಗಡೆ ಹಾಗೂ ವೀಣಾ ಹೆಗಡೆ ದಂಪತಿಯ ದ್ವಿತೀಯ ಪುತ್ರಿಯಾದ ಪ್ರೀತಿ ಬಾಲ್ಕದಿಂದಲೇ ಶ್ರವಣದೋಷ ಹಾಗೂ ಮಾತಿನ ದೋಷ ಹೊಂದಿದ್ದರು. ಆದರೆ, ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ಪ್ರೀತಿ, ವಿಶೇಷ ಶಾಲೆಯಲ್ಲಿ ಕಲಿತು ಮಾತಿನ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಅಬಳಿಕ ಧಾರವಾಡ ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದು ಸಮಾಜದ ನಡುವೆ ಒಂದಾದ ಅವಳಿಗೆ ವಿಶೇಷವಾಗಿ ಸಾಧನೆ ಮಾಡಬೇಕು ಎಂಬ ಹಂಬಲ ಇತ್ತು ಈ ಹಿನ್ನೆಲೆಯಲ್ಲಿ ಇತ್ತೀಚೆಗೆ
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಮತ್ತು 200 ಮೀ ಓಟದಲ್ಲಿ ಎರಡನೇ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಆ ಬಳಿಕ ಬೆಂಗಳೂರಿನಲ್ಲಿ ಎರಡು ತಿಂಗಳ ಕಾಲ ಎತ್ತರ ಜಿಗಿತದ ತರಬೇತಿ ಪಡೆದ ಅವಳು, ಗುಜರಾತಿನ ಅಹಮದಾಬಾದಿನಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದು ರಾಜ್ಯಕ್ಕೆ,ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ರಾಷ್ಟ್ರಕ್ಕಾಗಿ ನಾವು ಸೇವೆ ಮಾಡಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ವಿಶೇಷ ಗೌರವ ಇರುವ ಈ ದಿನಗಳಲ್ಲಿ ನಾವು ನಮ್ಮ ಕೈಲಾದ ಸೇವೆ ಮಾಡಬೇಕು. ನಾವು ದೃಢ ವಿಶ್ವಾಸ, ಸಾಧನೆಯ ದಾರಿಯಲ್ಲಿದ್ದರೆ ಸಮಸ್ಯೆಗಳು ಗೌಣ ಆಗುತ್ತವೆ ಎಂಬ ಸಂದೇಶವನ್ನು ಇತರರಿಗೂ ತಲುಪಿಸಬೇಕು ಎಂಬುದು ನನ್ನ ಹಂಬಲ ಎನ್ನುತ್ತಾಳೆ ಪ್ರೀತಿ ಹೆಗಡೆ.