ಸುದ್ದಿ ಕನ್ನಡ ವಾರ್ತೆ
ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಮೂಲದ ಪುಟ್ಟ ಬಾಲಕಿ ರಿಧಿಮಾ ಅಮೀನ್, ರಾಷ್ಟ್ರಮಟ್ಟದ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.

ಕೇವಲ 4 ವರ್ಷ 5 ತಿಂಗಳ ಪ್ರಾಯದ ಈ ಬಾಲಕಿ,ಅತ್ಯಂತ ಕಠಿಣವಾದ ಸಂಪೂರ್ಣ ಹನುಮಾನ್ ಚಾಲೀಸಾವನ್ನು ಕೇವಲ 2 ನಿಮಿಷ 7 ಸೆಕೆಂಡುಗಳಲ್ಲಿ ಸ್ಪಷ್ಟವಾಗಿ ಪಠಿಸುವ ಮೂಲಕ ಈ ಅಮೋಘ ಸಾಧನೆ ಮಾಡಿದ್ದಾಳೆ.

ಗೇರುಸೊಪ್ಪದ ನಿವಾಸಿಗಳಾದ ರಾಧಿಕಾ ಮೇಸ್ತ ಹಾಗೂ ದೇವದಾಸ್ ದಂಪತಿಯ ಪುತ್ರಿಯಾದ ರಿಧಿಮಾ, ಪ್ರಸ್ತುತ ಮಂಗಳೂರಿನ ವಾಮಂಜೂರಿನ ‘ಚೈತನ್ಯ ಪ್ರಿ-ಸ್ಕೂಲ್’ನಲ್ಲಿ ನರ್ಸರಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಸ್ಮರಣಶಕ್ತಿ ಹೊಂದಿರುವ ಈಕೆ, ಮಂತ್ರಗಳನ್ನು ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ಉಚ್ಚರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಬಾಲಕಿಯ ಈ ವಿಶಿಷ್ಟ ಸಾಧನೆಗೆ ಶಾಲಾ ಮಂಡಳಿ, ಶಿಕ್ಷಕರು ಹಾಗೂ ಗೇರುಸೊಪ್ಪ ಮತ್ತು ಹೊನ್ನಾವರ ಭಾಗದ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ. ಮಗಳ ಈ ಸಾಧನೆಗೆ ಪೋಷಕರು ಮತ್ತು ಮಾರ್ಗದರ್ಶನ ನೀಡಿದ ಶಿಕ್ಷಕರ ಶ್ರಮವೇ ಕಾರಣ ಎಂದು ಸ್ಥಳೀಯರು ಶ್ಲಾಘಿಸಿದ್ದಾರೆ.