ಸುದ್ದಿ ಕನ್ನಡ ವಾರ್ತೆ
ಶಿರಸಿ: ಬೇಡ್ತಿ, ಅಘನಾಶಿನಿ ಮತ್ತು ಶಾಲ್ಮಲಾ ನದಿಗಳ ತಿರುವು ಯೋಜನೆಗಳನ್ನು ಕೈಬಿಡಬೇಕು ಎಂಬ ಉದ್ದೇಶದಿಂದ ಭಕ್ತರಲ್ಲಿ ಜಾಗೃತಿ ಮೂಡಿಸಲು, ದೇವರಲ್ಲಿ ಪ್ರಾರ್ಥಿಸಲು ಯುಗಾದಿಯಿಂದ ರಾಮನವಮಿಯವರೆಗೆ ಭಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪೂಜೆ ಹಾಗೂ ಭಜನೆ ಆಧ್ಯಾತ್ಮಿಕ ಶಕ್ತಿ ಜಾಗೃತಿಗೊಳಿಸಿ ಕೆಲಸ ಮಾಡುತ್ತವೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿ ನುಡಿದರು.
ನಗರದ ಯೋಗ ಮಂದಿರದಲ್ಲಿ ಯುಗಾದಿ ಹಬ್ಬದ ದಿನದಂದು ನದಿ ಜೋಡಣೆ ವಿರೋಧಿಸಿ, ಜಾಗೃತಿ ಭಜನಾ, ಪತ್ರ ಚಳುವಳಿ ಅಭಿಯಾನಕ್ಕೆ ಚಾಲನೆ ನೀಡಿ ಆಶೀರ್ವಚನ ನುಡಿದರು. ಒಂಬತ್ತು ದಿನಗಳ ಕಾಲ ಪಟ್ಟಣ, ಗ್ರಾಮ, ಸೀಮಾ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಅಭಿಯಾನ ನಡೆಸಲು ಸೂಚಿಸಿದ್ದೇವೆ. ರಾಮನವಮಿ ಬಂದಿದ್ದ ಕಾರಣದಿಂದ ರಾಮನ ಭಜನೆ ಮಾಡಬಹುದು. ಯಾವುದೇ ದೇವರದ್ದು ಭಜನೆ ಮಾಡಬಹುದು. ನದಿ ಜೋಡಣೆ ವಿರುದ್ದ ಮಾಹಿತಿ ಪಡೆಯಬಹುದು, ಘೋಷಣೆ ಕೂಗಬಹುದು ಎಂದರು. ಇತ್ತೀಚೆಗೆ ಬೇಡ್ತಿ (ಗಂಗಾವಳಿ) ಮತ್ತು ಅಘನಾಶಿನಿ ನದಿಗಳಲ್ಲಿ ನಡೆಸಿದ ಪೂಜೆ ಹಾಗೂ ಗಂಗಾರತಿ ಕಾರ್ಯಕ್ರಮಗಳು ಚಳುವಳಿಗೆ ಬಲ ನೀಡಿದ್ದನ್ನು ಸ್ಮರಿಸಿದ ಶ್ರೀಗಳು, ಭಜನಾ ಅಭಿಯಾನದಲ್ಲಿ ಸಹಿ ಸಂಗ್ರಹಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಅಲ್ಲದೆ, ನದಿ ಉಳಿಸುವ ಹೋರಾಟಕ್ಕೆ ಬೆಂಬಲವಾಗಿ ಪತ್ರ ಚಳುವಳಿ ಮಾಡಬೇಕಿದೆ. ಎಲ್ಲರೂ ಅಧಿಕಾರಿಗಳಿಗೆ, ಸಚಿವರು, ಸಿಎಂ, ಪ್ರಧಾನಿಗಳಿಗೆ ಪತ್ರ ಬರೆಯಬೇಕು ಎಂದರು.
ಇನ್ನು ಜೂನ್ ೫ ರಂದು ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ನಮ್ಮ ನೀರು ನಮಗೇ ಬೇಕು ಎಂಬ ಘೋಷಣೆ ಕೂಗಿ ಎರಡೂ ನದಿ ಕೊಳ್ಳದಲ್ಲಿ ಗಿಡ ನೆಡಬೇಕು ಎಂದೂ ಹೇಳಿದರು.
ಈ ವೇಳೆ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಅಶೀಸರ, ನದಿ ಜೋಡಣಾ ಸಮಸ್ಯೆ, ಮುಂದಿನ ಹೋರಾಟ, ನೂತನ ವೆಬ್ ಸೈಟ್ ಮಾಹಿತಿಯನ್ನು ತಿಳಿಸಿದರು.
ಶ್ರೀ ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ಮಾತೃಮಂಡಳಿ ಅಧ್ಯಕ್ಷೆ ಗೀತಾ ಹೆಗಡೆ ಶೀಗೆಮನೆ, ಯೋಗ ಮಂದಿರದ ಸಿ.ಎಸ್.ಹೆಗಡೆ, ಉಪಾಧ್ಯ ಎಸ್.ಎನ್.ಭಟ್ಟ, ಭಾರತಿ ಹೆಗಡೆ, ಮಧುಮತಿ ಹೆಗಡೆ, ಕೇಶವ ಕೊರ್ಸೆ ಇತರರು ಇದ್ದರು.
ಇದೇ ವೇಳೆ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಭಗೀರಥ ಡಾಟ್ ಕಾಮ್ ಚಾಲನೆಗೆ ಶ್ರೀಗಳು ಚಾಲನೆ ನೀಡಿದರು.
