ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಹುಡಸಾ ಗ್ರಾಮದ ವ್ಯಾಪ್ತಿಯಲ್ಲಿಯ ಮುಂಡಗೋಡ ಅಣಶಿ ರಾಜ್ಯ ಹೆದ್ದಾರಿಯ ಪೋಟೋಲಿ-ಗುಂದ-ಉಳವಿ ಮಾರ್ಗದಲ್ಲಿಯ ಕೈಟಾನಾಲಾ ಸೇತುವೆಯ ಅಂಚು ಕಳೆದ ವರ್ಷದ ಜುಲೈ ತಿಂಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಕುಸಿದಿತ್ತು.
ಸೇತುವೆಯ ಅಂಚು ಕುಸಿದ ಪರಿಣಾಮ,ಮುನ್ನಚ್ಚೇರಿಕೆಯ ಕಾರಣಗಳಿಂದ ಬಸ್ ಸಹಿತ ಭಾರೀ ವಾಹನಗಳ ಸಂಚಾರ ನಿಲ್ಲಿಸಿ,ಉಳವಿ-ಕುಂಬಾರವಾಡಾ ಪರ್ಯಾಯ ಮಾರ್ಗವಾಗಿ ಬಸ್ ಸಂಚಾರ ಆರಂಭಿಸಲಾಗಿತ್ತು. ಸೇತುವೆಯ ಕುಸಿತದ ಬಗ್ಗೆ ಮಾನ್ಯ ಶಾಸಕರ ಗಮನಕ್ಕೆ ಸ್ಥಳೀಯ ಜನಪ್ರತಿನಿಧಿಗಳು,ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದರು.ಶಾಸಕರು ಸಹ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿ ಶೀಘ್ರ,ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ಸೂಚನೆ ನೀಡಿದ್ದರು.
ಕಳೆದ ವರ್ಷದ ಡಿಸೆಂಬರ ತಿಂಗಳಲ್ಲಿ ಸೇತುವೆಯ ಪಕ್ಕದಲ್ಲಿ ಪರ್ಯಾಯ ರಸ್ತೆಯನ್ನು ಮಾಡುವ ಮೂಲಕ ಸಣ್ಣ ವಾಹನಗಳಿಗೆ ಸಂಚಾರಕ್ಕೆ ಅವಕಾಶ ಮಾಡಿ,ಸೇತುವೆಯ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ಸದ್ಯ ಸೇತುವೆಯು ಪೂರ್ಣಗೊಂಡಿದ್ದು, ವಾಹನ ಓಡಾಟಕ್ಕೆ ಸಿದ್ದಗೊಂಡಿದ ಬಗ್ಗೆ ಲೋಕೋಪಯೋಗಿ ಇಲಾಖೆ ಜೋಯಿಡಾರವರು ತಹಶೀಲ್ದಾರ್ ಜೋಯಿಡಾ,ಪಿಎಸ್‌ಐ ಜೋಯಿಡಾ,ಬಸ್ ಡಿಪೋ ವ್ಯವಸ್ಥಾಪಕರು ದಾಂಡೇಲಿಯವರಿಗೆ ಪತ್ರ ಮುಖೇನ ತಿಳಿಸಿದ್ದರು. ಸುಮಾರು ಎಂಟು ತಿಂಗಳದ ಬಳಿಕ ಮಂಗಳವಾರ ಮಧ್ಯಾಹ್ನ ಬೈಲಹೊಂಗಲ-ಉಳವಿ ಬಸ್,ರಾತ್ರಿಯ ತಮ್ಮಣಗಿ ಬಸ್ ಇದೇ ಮಾರ್ಗವಾಗಿ ಸಂಚಾರ ಆರಂಭ ಮಾಡಿದ್ದು, ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಹೊಸ ಸೇತುವೆ ನಿರ್ಮಾಣ ಆಗಲು ಸಹಕರಿಸಿದ ಮಾನ್ಯ ಶಾಸಕರಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗದವರಿಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
