ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ಅರಣ್ಯ ಇಲಾಖೆಯ ವ್ಯಾಪ್ತಿಯ ದಾಂಡೇಲಿ-ಪೋಟೋಲಿ-ಗುಂದ-ಉಳವಿ ಮಾರ್ಗವಾಗಿ ಹೋಗುವ ಮಾರ್ಗ ಮಧ್ಯ ಅವುರ್ಲಿಯ ಬಳಿ ಮುಖ್ಯ ರಸ್ತೆಯಿಂದ 2 ಕಿ.ಮೀ ದೂರ ಇರುವ ಸುಂದರ ಪ್ರವಾಸಿ ತಾಣ. ಒಮ್ಮೆ ನೋಡಲು ಬಂದರೆ ಮತ್ತೇ ಮತ್ತೇ ನೋಡಬೇಕೆನಿಸುವ ಸ್ಥಳವೇ ಸಿಂಥೇರಿ ರಾಕ್ಸ್ (Syntheri Rocks).
ದಾಂಡೇಲಿಯಿಂದ-ಪೋಟೋಲಿ ಮಾರ್ಗವಾಗಿ ಸಿಂಥೇರಿ ರಾಕ್ಸ್ ಗೆ 25 ಕಿ.ಮೀ ದೂರ. ತಾಲೂಕಾ ಕೇಂದ್ರ ಜೋಯಿಡಾ-ಹುಡಸಾ ಮಾರ್ಗವಾಗಿ ಬರುವವರಿಗೆ 15 ಕಿ.ಮೀ ದೂರದಲ್ಲಿದೆ.
ಕಾರವಾರ – ಉಳವಿ – ಗುಂದ ಮಾರ್ಗವಾಗಿ, ಹಾಗೂ ಯಲ್ಲಾಪುರ – ಭಾಗವತಿ – ಕುಳಗಿ – ಪೋಟೋಲಿ ಮಾರ್ಗವಾಗಿ ಬರಬಹುದು. ಕಳೆದ ವರ್ಷದ ಜುಲೈ ತಿಂಗಳ ಮಳೆಗಾಲದ ಸಂದರ್ಭದಲ್ಲಿ ಕೈಟಾನಾಲಾ ಸೇತುವೆಯ ಅಂಚು ಕುಸಿದ ಕಾರಣ ಸಿಂಥೇರಿ ರಾಕ್ಸ್ ವೀಕ್ಷಣೆಯನ್ನು ನಿಲ್ಲಿಸಲಾಗಿತ್ತು, ಕಳೆದ ಫೆಬ್ರುವರಿ 2026ರ 24 ರಿಂದ ಮತ್ತೇ ವೀಕ್ಷಣೆ ಯನ್ನು ಪ್ರಾರಂಭಿಸಲಾಗಿದೆ.ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಈ ಪ್ರವಾಸಿ ತಾಣದ ನಿಸರ್ಗ ಸೌಂದರ್ಯವನ್ನು ಸುರಕ್ಷತೆಯೊಂದಿಗೆ ಅನುಭವಿಸಬೇಕೆಂಬುದು ಅವುರ್ಲಿ ಪರಿಸರ ಅಭಿವೃದ್ಧಿ ಸಮಿತಿಯವರ ಹಾಗೂ ಅರಣ್ಯ ಇಲಾಖೆಯವರ ಮನವಿಯಾಗಿದೆ.
ಅಚ್ಚುಕಟ್ಟಾದ ವ್ಯವಸ್ಥೆ:
ಅರಣ್ಯ ಇಲಾಖೆ ಹಾಗೂ ಸ್ಥಳೀಯ ಪರಿಸರ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಇಡೀ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದು, ಪ್ರವಾಸಿಗರಿಗೆ ಹಾಗೂ ವಾಹನಗಳಿಗೆ ಇಲ್ಲಿನ ಪರಿಸರ ಅಭಿವೃದ್ಧಿ,ನಿರ್ವಹಣೆ, ಸುರಕ್ಷತೆ, ದೃಷ್ಟಿಯಿಂದ ನಿಗದಿತ ಶುಲ್ಕ ನಿಗದಿಪಡಿಸಲಾಗಿದೆ. ಸ್ಥಳೀಯ ಉತ್ಸಾಹಿ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ ಅವುರ್ಲಿ ನೇತೃತ್ವದ ಪರಿಸರ ಅಭಿವೃದ್ಧಿ ಸಮಿತಿ, ಸಮಿತಿಯ ಸದಸ್ಯರು ಹಾಗೂ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗಳಾದ ರವಿಕಿರಣ ಸಂಪಗಾವಿ ಅವರ ಮಾರ್ಗದರ್ಶನದಲ್ಲಿ ಇಡಿಸಿ ಕಾರ್ಯದರ್ಶಿಗಳಾದ ಶಾಂತಾರಾಮ,ಅರಣ್ಯ ರಕ್ಷಕರಾದ ರೇವಣಸಿದ್ದ ಕೆ. ಸಿಬ್ಬಂದಿಗಳ ಜೊತೆಗೂಡಿ ಪ್ರತಿವರ್ಷ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತಾರೆ. ಈ ಹಿಂದೆ ಶ್ರೀಕೃಷ್ಣ ವೇಳಿಪರವರು ಪರಿಸರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಂದರ್ಭದಲ್ಲಿ ಉತ್ತಮ ಇಡಿಸಿ ಎಂಬ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಂದ ಪುರಸ್ಕಾರವು ಲಭಿಸಿದೆ. ಪರಿಸರ ಕೆಡಿಸಬೇಡಿ: ನೀವೂ ಅಪಾಯ ತಂದುಕೊಳ್ಳಬೇಡಿ:
ಸದ್ಯ ಇಲ್ಲಿನ ವ್ಯವಸ್ಥೆಯನ್ನು ಅರಣ್ಯ ಇಲಾಖೆಯ ಹಾಗೂ ಪರಿಸರ ಅಭಿವೃದ್ಧಿ ಸಮಿತಿಯ ವಾಚರ್ಗಳು ನೋಡಿಕೊಳ್ಳುತ್ತಿದ್ದು,ಸುರಕ್ಷತೆಯ ದೃಷ್ಟಿಯಿಂದ ನೀರಿನಲ್ಲಿ ಈಜಾಡುವುದನ್ನು ನಿಷೇಧಿಸಿದೆ. ಅಪಾಯವಾದ ಸುಳಿಗಳು, ಕೋರಕಲುಗಳಿವೆ, ಪ್ರಾಣ ಹಾನಿಯೂ ಆಗಿದ್ದು ಇರುತ್ತದೆ. ನಿಸರ್ಗ ಸೌಂದರ್ಯವನ್ನು ಸವಿಯಲು ಮೆಟ್ಟಿಲುಗಳನ್ನು, ಪ್ಯಾರಾಗೋಲಗಳನ್ನು ಮಾಡಲಾಗಿದೆ. ಸ್ಥಳೀಯರು ನಡೆಸುತ್ತಿರುವ ಕ್ಯಾಂಟೀನ್ ವ್ಯವಸ್ಥೆಯೂ ಇದೆ. ಯಾವುದೇ ತರಹದ ರೀತಿಯಲ್ಲಿ ಪರಿಸರಕ್ಕೆ,ಜೀವ ಸಂಕುಲಗಳಿಗೆ ಹಾನಿಯಾಗದಂತೆ ಪ್ಲಾಸ್ಟಿಕ್ ಬಳಸದೇ,ಸ್ವಚ್ಛತೆಯನ್ನು ಕಾಪಾಡಿ, ಕರ್ಕಶ ಶಬ್ದ ಮಾಡದೇ, ಧೂಮಪಾನ ಮಾಡದೇ, ಪ್ರವಾಸಿಗರು ಜೀವಕ್ಕೂ ಹಾನಿ ಮಾಡಿಕೊಳ್ಳದೇ ಇಲ್ಲಿನ ನಿಯಮಗಳನ್ನು ಪಾಲಿಸಿ ಸುಂದರ ಪ್ರವಾಸಿ ತಾಣದ ಸೌಂದರ್ಯವನ್ನು ಸವಿಯಬೇಕೆಂಬುದೇ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಪರಿಸರ ಅಭಿವೃದ್ಧಿ ಸಮಿತಿಯ ಆಶಯವಾಗಿದೆ.(ವರದಿ:ಧವಳೋ ಗಣೇಶ ಸಾವರ್ಕರ್ ಗುಂದ,ಜೋಯಿಡಾ.).
