Banner Ad

ಸುದ್ದಿ ಕನ್ನಡ ವಾರ್ತೆ

ಶಿರಸಿ: ಜಿಲ್ಲೆಯ ಅಡಕೆ, ಕಾಳುಮೆಣಸು, ಮಾವು ಬೆಳೆಯುವ ರೈತರು ದೀರ್ಘಕಾಲದಿಂದ ನಿರೀಕ್ಷಿಸುತಿದ್ದ ಹವಾಮಾನ ಆಧಾರಿತ ಬೆಳೆವಿಮೆಯ ಮೊತ್ತವು ಇಂದಿನಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲು ಪ್ರಾರಂಭವಾಗಿದೆ. ಸಂಕಷ್ಟದ ಕಾಲದಲ್ಲಿ ರೈತರ ಜೊತೆಗೆ ಎಂದಿನಂತೆ ನಿಂತಿರುವ ಸಂಸದರಾದ ಕಾಗೇರಿಯವರನ್ನು ಮುಕ್ತಕಂಠದಿಂದ ಅಭಿನಂದಿಸುವುದಾಗಿ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.

Banner Ad

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿನ ರೈತರು ಎಲೆ ಚುಕ್ಕಿ ರೋಗದ ಬಾಧೆ ಮತ್ತು ಅಡಕೆ, ಮಾವು, ಕಾಳು ಮೆಣಸು ಸೇರಿದಂತೆ ಬಹುತೇಕ ಬೆಳೆಯ ಇಳುವರಿ ಕುಂಠಿತಗೊಂಡು ಆರ್ಥಿಕ ಸಂಕಷ್ಟದಲ್ಲಿದ್ದಾಗ ರೈತರ ಪರವಾಗಿ ರಾಜ್ಯ ಸರ್ಕಾರವು ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದರೂ ಸಹ, ನಮ್ಮ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸತತ ಪ್ರಯತ್ನಪಟ್ಟು ಕೇಂದ್ರ ಸರ್ಕಾರದ ಮಟ್ಟದಲ್ಲಿ ಬೆನ್ನತ್ತಿಹೋಗಿ ಈ ವಿಮಾ ಮೊತ್ತವನ್ನು ಮಂಜೂರಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಹಂತವಾಗಿ ಇಂದು ಸುಮಾರು 14 ಕೋಟಿ ರೂಪಾಯಿಗಳ ಬೃಹತ್ ಮೊತ್ತವು ಅರ್ಹ ರೈತರ ಖಾತೆಗಳನ್ನು ತಲುಪಿದ್ದು, ಈ ಪ್ರಕ್ರಿಯೆಯು ಇಂದಿನಿಂದ ಸತತವಾಗಿ ಮುಂದುವರಿಯಲಿದೆ.

ಸುಮಾರು 74 ಕೋಟಿ ರೂಪಾಯಿಗಳ ವಿಮೆ ಹಣ ಮುಂದಿನ ದಿನದಲ್ಲಿ ರೈತರ ಖಾತೆಗಳಿಗೆ ಹಂತ ಹಂತವಾಗಿ ಜಮೆಯಾಗಲಿದೆ. ತಾಂತ್ರಿಕ ಕಾರಣಗಳಿಂದ ಕೆಲ ದಿನ ವಿಳಂಬವಾಗಿದ್ದರೂ ಧೃತಿಗೆಡದೆ ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಬೆಳೆವಿಮೆಯನ್ನು ಶೀಘ್ರವಾಗಿ ಕೊಡಿಸಲು ಶ್ರಮಿಸಿದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಗೆ, ಕೇಂದ್ರ ಕೃಷಿಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹಾಗು ವಿಶೇಷವಾಗಿ ನಮ್ಮ ಹೆಮ್ಮೆಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಜಿಲ್ಲೆಯ ಸಮಸ್ತ ರೈತರ ಬಾಂದವರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

Banner Ad