ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂದದ ಕ್ರೀಡಾ ಮೈದಾನದಲ್ಲಿ ಗುಂದ-11 ಕ್ರೀಡಾ ಸಂಘದ ವತಿಯಿಂದ ಆಯೋಜಿಸಿದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ದಿನಾಂಕ:13-03-2026 ರ ಶುಕ್ರವಾರ ಅದ್ಧೂರಿ ಚಾಲನೆ ನೀಡಲಾಯಿತು.

ಕ್ರೀಡಾಕೂಟದ ಸಭಾ ಕಾರ್ಯಕ್ರಮದ ವೇದಿಕೆಯ ಗಣ್ಯರನ್ನು ಗುಂದ-11 ಕ್ರೀಡಾಸಂಘದ ಪದಾಧಿಕಾರಿಯಾದ ರಮಾನಂದ ಕುಟ್ಟಿಕರ ಅವರು ಕ್ರೀಡಾ ಸಂಘದ ಸದಸ್ಯರ ಮೂಲಕ ಹೂ ಗುಚ್ಛ ನೀಡುವ ಮೂಲಕ ಸ್ವಾಗತಿಸಿದರು. ಕ್ರೀಡಾಕೂಟದ ಉದ್ಘಾಟನೆಯನ್ನು ನಂದಿಗದ್ದೆ ಗ್ರಾಮ ಪಂಚಾಯತದ ನಿಕಟ ಪೂರ್ವ ಮಾಜಿ ಅಧ್ಯಕ್ಷರಾದ ಅರುಣ ದೇಸಾಯಿ ನೇರವೇರಿಸಿದರು, ಉಪಸ್ಥಿತರಿದ್ದ ಗಣ್ಯರು ಸಹಕಾರ ನೀಡಿದರು. ನಂತರ ಕ್ರೀಡಾಕೂಟವನ್ನು ಉದ್ದೇಶಿಸಿ ಅರುಣ ದೇಸಾಯಿಯವರು ಮಾತನಾಡಿ ಇಲ್ಲಿನ ಕ್ರೀಡಾ ಸಂಘದವರು ಉತ್ಸಾಹದಿಂದ ಕ್ರೀಡಾಕೂಟವನ್ನು ಆಯೋಜಿಸಿದ್ದೀರಿ,ಈ ಗ್ರಾಮದ ಜನರ ಅತಿಥಿ ಸತ್ಕಾರ ಎಲ್ಲರೂ ಮೆಚ್ಚುವಂತದ್ದು,ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟಕ್ಕೆ ನನ್ನ ಎಲ್ಲಾ ರೀತಿಯ ಸಹಕಾರ ಇರಲಿದೆ.ಎಲ್ಲರೂ ಕ್ರೀಡಾ ಮನೋಭಾವನೆಯಿಂದ ಆಟವಾಡಿ,ಯೋಗ,ಯೋಗ್ಯತೆ, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಯಶಸ್ಸು ಖಂಡಿತ ಎಂದು ಹೇಳಿದರು. ಸಾಮಾಜಿಕ ಕಾರ್ಯಕರ್ತರಾದ ಸದಾನಂದ ಉಪಾಧ್ಯರವರು ಮಾತನಾಡಿ ಒಳ್ಳೇಯ ಕೆಲಸದ ಕಡೆಗೆ ಪ್ರಯತ್ನದ ಹೆಜ್ಜೆಯನ್ನು ನಾವು ನಿರಂತರವಾಗಿ ಇಡಬೇಕು,ಕ್ರೀಡಾಕೂಟದಲ್ಲಿ ಮುಕ್ತ ಮನಸ್ಸಿನಿಂದ ಎಲ್ಲರೂ ಭಾಗವಹಿಸಿ,ನಮ್ಮ ಸಹಕಾರ ಸದಾ ಇರುತ್ತದೆ,ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಹೇಳಿದರು. ಪತ್ರಕರ್ತರಾದ ಸಂದೇಶ ದೇಸಾಯಿ ಮಾತನಾಡಿ ಗುಂದದ ಕ್ರೀಡಾ ಸಂಘದ ಬಂಧುಗಳು ಉತ್ಸಾಹದಿಂದ ಕ್ರೀಡಾಕೂಟವನ್ನು ಆಯೋಜಿಸಿದ್ದು,ಕ್ರೀಡಾಕೂಟದ ಸಂಘಟನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ನಂದಿಗದ್ದೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಗಲಾ ಉಪಾಧ್ಯ,ನಂದಿಗದ್ದೆ ಗ್ರಾಮ ಪಂಚಾಯತದ ನಿಕಟ ಪೂರ್ವ ಉಪಾಧ್ಯಕ್ಷರಾದ ದಾಕ್ಷಾಯಣಿ ದಾನಶೂರ, ಸದಸ್ಯರಾದ ಶೋಭಾ ಎಲ್ಲೇಕರ,ಸಾಮಾಜಿಕ ಕಾರ್ಯಕರ್ತರಾದ ನರಸಿಂಹ ಭಾಗ್ವತ,ಶಿವರಾಮ ಕುಟ್ಟಿಕರ,ಲಕ್ಷ್ಮಣ ಬರ್ಸೇಕರ(ಊರಿನ ಮಿರಾಶಿ) ಕ್ರೀಡಾಕೂಟದ ಸಂಘಟನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಕ್ರೀಡಾಕೂಟದ ಯಶಸ್ಸಿಗೆ ಶುಭ ಕೋರಿದರು.

ಪ್ರೇರಣಾ ಸಂಸ್ಥೆಯ ಅಧ್ಯಕ್ಷರಾದ ಸುಕನ್ಯಾ ದೇಸಾಯಿಯವರು ಮಾತನಾಡಿ ಯಾವುದೇ ಕಾರ್ಯಕ್ರಮದ ಸಂಘಟನೆ ಅಷ್ಟು ಸುಲಭವಲ್ಲ,ಹಲವಾರು ಅಡೆತಡೆಗಳು ಬರುತ್ತವೆ, ಅವೆಲ್ಲವನ್ನು ಮೆಟ್ಟಿ ಗಟ್ಟಿಯಾಗಿ ನಿಂತರೆ ಮಾತ್ರ ಸಂಘಟನೆಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಬಹುದು,ಈ ದಿಶೆಯಲ್ಲಿ ನಿಮ್ಮೆಲ್ಲರ ಪ್ರಯತ್ನ ಇರಲಿ,ನಾವು ನಿಮ್ಮ ಜೊತೆ ಕೈ ಜೋಡಿಸುತ್ತೇವೆ ಎಂದು ಹೇಳಿದರು. ನಂದಿಗದ್ದೆ ಗ್ರಾಮ ಪಂಚಾಯತದ ನಿಕಟ ಪೂರ್ವ ಮಾಜಿ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಮಾತನಾಡಿ ಕ್ರೀಡೆಯಿಂದ ಮಾನಸಿಕ ನೆಮ್ಮದಿ,ದೈಹಿಕ ಆರೋಗ್ಯ ಸದೃಢವಾಗುತ್ತದೆ,ಇಂದಿನ ಓಡಾಟ ದ ಜೀವನ,ಜೊತೆಗೆ ವಾಣಿಜ್ಯಕರಣದ ಜೀವನದ ಭರದಲ್ಲಿ ಇಂತಹ ಕ್ರೀಡಾಕೂಟದ ಆಯೋಜನೆ ಅವಶ್ಯಕತೆ ಇದೆ,ಕ್ರೀಡಾಕೂಟಗಳಿಂದ ನಾಯಕತ್ವ,ಶಿಸ್ತು,ಸಂಯಮ, ಸಮಯ ಪಾಲನೆ,ಸೌಹಾರ್ದತೆಯ ವಾತಾವರಣ,ಪರಸ್ಪರ ಸಹಬಾಳ್ವೆಯ ಗುಣಗಳನ್ನು ನಾವು ಗಳಿಸುಬಹುದಾಗಿದೆ. ಕ್ರೀಡಾಕೂಟವನ್ನು ಆಯೋಜಿಸುವುದರಿಂದ ಸಮಾಜದಲ್ಲಿ ಸಾಮರಸ್ಯ ಸಾಧ್ಯ ಎಂದು ಹೇಳಿ ಕ್ರೀಡಾಕೂಟದ ಯಶಸ್ಸಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಂದಿಗದ್ದಾ ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ದಾನಗೇರಿ ಮಾತನಾಡಿ ಕ್ರೀಡಾಕೂಟದಲ್ಲಿ ಭಾಗವಹಿಸುವಂತಹ ತಂಡಗಳು ಕ್ರೀಡಾ ಮನೋಭಾವದಿಂದ ಆಟವಾಡಿ,ನಿರ್ಣಾಯಕರ ನಿರ್ಣಯಕ್ಕೆ ಬದ್ಧರಾಗಿ ಕ್ರೀಡಾಕೂಟವನ್ನು ಯಶಸ್ವಿಯಾಗಲು ಸಹಕರಿಸಿ, ಕ್ರೀಡಾಕೂಟದ ಯಶಸ್ಸಿಗೆ ತನು ಮನ ಧನದ ಸಹಕಾರ ಯಾವತ್ತು ಇರಲಿದೆ,ಕ್ರೀಡಾಕೂಟ ಮುಂದಿನ ದಿನಗಳಲ್ಲಿ ನಿರಂತರವಾಗಿ ಇರಲಿ ಎಂದು ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ರಮಾನಂದ ಕುಟ್ಟಿಕರ ಅವರು ಎಲ್ಲರಿಗೆ ವಂದನಾರ್ಪಣೆಯನ್ನು ಸಲ್ಲಿಸಿದರು.ಸಂಘದ ಪದಾಧಿಕಾರಿಗಳಾದ ರವೀಂದ್ರ ಸಾವರಕರ,ದಿನೇಶ ಕುಟ್ಟಿಕರ, ಇನ್ನಿತರ ಸಂಘದ ಎಲ್ಲಾ ಪದಾಧಿಕಾರಿಗಳು ಕ್ರೀಡಾಕೂಟದ ಆಯೋಜನೆಗೆ ಸಹಕರಿಸಿದರು.