ಸುದ್ದಿ ಕನ್ನಡ ವಾರ್ತೆ
ಬೆಂಗಳೂರು: ಶರಾವತಿ ಸಿಂಹ ಬಾಲದ ಕೋತಿ ಅಭಯಾರಣ್ಯ ಮತ್ತು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಉದ್ದೇಶಿತ ‘ಶರಾವತಿ ಪಂಪ್ ಸ್ಟೋರೇಜ್ ಯೋಜನೆ’ಗೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿ ಅಥವಾ ಚಟುವಟಿಕೆಗಳನ್ನು ನಡೆಸದಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಮಧ್ಯಂತರ ಆದೇಶ ಹೊರಡಿಸಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಮತ್ತು ನ್ಯಾಯಮೂರ್ತಿ ಸಿ. ಎಂ. ಪೂನಾಚ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ನ್ಯಾಯಾಲಯದ ಮುಂದಿನ ಆದೇಶದವರೆಗೆ ಅಭಯಾರಣ್ಯ ಮತ್ತು ಪರಿಸರ ಸೂಕ್ಷ್ಮ ವಲಯದೊಳಗೆ ಯೋಜನೆಯ ಮುಂದುವರಿಕೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳನ್ನು ನಡೆಸಬಾರದು ಎಂದು ಪೀಠವು ಸ್ಪಷ್ಟಪಡಿಸಿತು.

ಪರಿಸರವಾದಿಗಳಾದ ಅಖಿಲೇಶ್ ಚಿಪ್ಪಿ, ರವೀಂದ್ರನಾಥ ಶಾನಭಾಗ್ ಮತ್ತು ಮನೋಹರಕುಮಾರ ಸಿ.ಬಿ. ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಆದೇಶ ನೀಡಿದೆ.
ಈ ಯೋಜನೆಗೆ ಒಟ್ಟು 142.763 ಹೆಕ್ಟೇರ್ ಭೂಮಿಯ ಅಗತ್ಯವಿದ್ದು, ಅದರಲ್ಲಿ 103 ಹೆಕ್ಟೇ‌ರ್ ಪ್ರದೇಶವು ನೇರವಾಗಿ ಶರಾವತಿ ಕಣಿವೆಯ ಸಿಂಹ ಬಾಲದ ಕೋತಿ ಅಭಯಾರಣ್ಯದ ಒಳಗಿದೆ. ಉಳಿದ 39.715 ಹೆಕ್ಟೇರ್ ಪ್ರದೇಶ ಪರಿಸರ ಸೂಕ್ತ ವಲಯದಲ್ಲಿದೆ. ವನ್ಯಜೀವಿ (ಸಂರಕ್ಷಣೆ) ಕಾಯ್ದೆಯ ಸೆಕ್ಷನ್ 29ರ ಪ್ರಕಾರ, ಅಭಯಾರಣ್ಯದೊಳಗೆ ವನ್ಯಜೀವಿಗಳ ಸುಧಾರಣೆ ಮತ್ತು ಉತ್ತಮ ನಿರ್ವಹಣೆಗೆ ಪೂರಕವಾದ ಚಟುವಟಿಕೆಗಳಿಗೆ ಮಾತ್ರ ಅವಕಾಶವಿದೆ.ಆದರೆ ಈ ಬೃಹತ್ ಜಲವಿದ್ಯುತ್ ಯೋಜನೆಗಾಗಿ ಸ್ಫೋಟಿಸುವುದು, ಸುರಂಗ ಕೊರೆಯುವುದು, ಕಲ್ಲು ಗಣಿಗಾರಿಕೆ ಮತ್ತು ತ್ಯಾಜ್ಯ ಸುರಿಯುವುದರಿಂದ ವನ್ಯಜೀವಿಗಳ ಆವಾಸಸ್ಥಾನ ನಾಶವಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟ‌ರ್ ಜನರಲ್ ಕೆ. ಅರವಿಂದ ಕಾಮತ್, ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಇನ್ನೂ ಸಿಕ್ಕಿಲ್ಲ. ಈ ಯೋಜನೆಯ ಬಗ್ಗೆ ಕೆಲವು ಗಂಭೀರ ಕಳವಳಗಳಿದ್ದು, ಅವುಗಳನ್ನು ಇನ್ನೂ ಸವಿವರವಾಗಿ ಪರಿಶೀಲಿಸಬೇಕಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಯೋಜನೆ ಬಗೆಗಿನ ಆತಂಕಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಮಧ್ಯಂತರ ತಡೆ ನೀಡದಂತೆ ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ಪೀಠ, ಯೋಜನೆಯಿಂದ ಆಗುವ ಪರಿಣಾಮಗಳ ಬಗ್ಗೆ ಆತಂಕವಿದೆ. ಈ ಕುರಿತು ಪರಿಶೀಲನೆ ನಡೆಸಬೇಕಿದೆ. ಹಾಗಾಗಿ, ಮುಂದಿನ ಆದೇಶದವರೆಗೆ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲೆ ಬಿ.ವಿ.ವಿದ್ಯುಲ್ಲತಾ ವಾದಿಸಿದ್ದರು.