ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ:ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ದೇವಿಯರ ಪುನ‌ರ್ ಪ್ರತಿಷ್ಠೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೋಮವಾರ ನೆರವೇರಿತು.

ಮೂರು ವರ್ಷಗಳಿಗೊಮ್ಮೆ ನಡೆಯುವ ಗ್ರಾಮದೇವಿ ಜಾತ್ರಾ ಮಹೋತ್ಸವ ಕಳೆದ ಫೆ11 ರಿಂದ ಪ್ರಾರಂಭವಾಗಿ ಫೆ. 19ರಂದು ಮುಗಿದಿದ್ದು, ಜಾತ್ರೆ ಮುಗಿದ 11ನೇ ದಿನ ದೇವಿಯರ ಪುನ‌ರ್ ಪ್ರತಿಷ್ಠೆ ನಡೆಯಿತು. ವೇ. ಸುಬ್ರಹ್ಮಣ್ಯ ಭಟ್ಟ ಕೊಂಕಣಕೊಪ್ಪ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಜಾತ್ರೆಯ ನಂತರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಗ್ರಾಮದೇವಿಯರ ಸನ್ನಿಧಿಯಲ್ಲಿ ದರ್ಶನ,ಪೂಜೆ,ಹಣ್ಣು ಕಾಯಿ, ಉಡಿ ತುಂಬುವುದು, ಕುಂಕುಮಾರ್ಚನೆ ಸೇವೆಗಳು ಪ್ರಾರಂಭಗೊಂಡವು. ಗಣೇಶ ಬಂಟ ತಯಾರಿಸಿದ ನೂತನ ದಿನದರ್ಶಿಕೆಯನ್ನು ಗ್ರಾಮದೇವಿಯರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು. ಪ್ರಮುಖರಾದ ಸಂತೋಷ ಗುಡಿಗಾರ, ಆದಿತ್ಯ ಗುಡಿಗಾರ, ಗಣೇಶ್ಚಂದ್ರ ಪಂಡರಾಪುರ, ಶಿರೀಷ ಪ್ರಭು ಸೇರಿದಂತೆ ಇತರರಿದ್ದರು.