ಸುದ್ದಿ ಕನ್ನಡ ವಾರ್ತೆ
ಶಿರಸಿ: ನಗರದ ದಕ್ಷಿಣ ಭಾರತದ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಚಂದ್ರಗ್ರಹಣದ ಇರುವ ಹಿನ್ನೆಲೆಯಲ್ಲಿ ದೇವಿಯ ಪೂಜೆ ಹಾಗೂ ದರ್ಶನದ ಸಮಯದಲ್ಲಿ ದೇವಾಲಯದ ಆಡಳಿತ ಮಂಡಳಿ ಮಹತ್ವದ ಬದಲಾವಣೆ ಮಾಡಿದೆ.

ಮಂಗಳವಾರ ಚಂದ್ರಗ್ರಹಣ ಇರುವುದರಿಂದ, ಭಕ್ತರಿಗೆ ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಂದಿನಂತೆ ದೇವಿಯ ದರ್ಶನ ಮತ್ತು ಪೂಜಾ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಗ್ರಹಣ ಕಾಲಾವಧಿ ಇರುವುದರಿಂದ ಈ ಸಮಯದಲ್ಲಿ ದೇವಿಯ ದರ್ಶನಕ್ಕೆ ಮಾತ್ರ ಅವಕಾಶವಿರುತ್ತದೆ. ಈ ಅವಧಿಯಲ್ಲಿ ಯಾವುದೇ ಪೂಜಾ ಸೇವೆಗಳು ನಡೆಯುವುದಿಲ್ಲ.

ಸಂಜೆ 7.30ರ ನಂತರ ದೇವಾಲಯದ ಅರ್ಚಕರು ಆಗಮಿಸಿ, ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ಆ ಬಳಿಕ ರಾತ್ರಿ 10 ಗಂಟೆಯವರೆಗೆ ಭಕ್ತರಿಗೆ ಮತ್ತೆ ದೇವಿಯ ಪೂಜೆ, ಸೇವೆ ಹಾಗೂ ದರ್ಶನ ಎಂದಿನಂತೆ ಮುಂದುವರಿಯಲಿದೆ.

ಇದೇ ವೇಳೆ, ಗ್ರಹಣದ ಕಾರಣದಿಂದಾಗಿ ಮಂಗಳವಾರದ ಮಧ್ಯಾಹ್ನ ದೇವಸ್ಥಾನದ ವತಿಯಿಂದ ಭಕ್ತರಿಗೆ ನೀಡಲಾಗುವ ಅನ್ನಪ್ರಸಾದ ವಿತರಣೆ ಇರುವುದಿಲ್ಲ ಎಂದು ದೇಗುಲದ ಪ್ರಮುಖರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಭಕ್ತರು ಈ ಬದಲಾವಣೆಗಳನ್ನು ಗಮನಿಸಿ ಸಹಕರಿಸುವಂತೆ ವಿನಂತಿಸಲಾಗಿದೆ.