ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹನುಮಾನಲೇನ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ನಿಮಿತ್ತ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಭಾರತೀಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು,ಹನುಮಾನಲೇನ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನರವರು ರಾಷ್ಟ್ರೀಯ ವಿಜ್ಞಾನ ದಿನವನ್ನು ಭಾರತದಲ್ಲಿ ಪ್ರತಿವರ್ಷ ಫೆಬ್ರವರಿ 28 ರಂದು ಆಚರಿಸಲಾಗುತ್ತದೆ. 1928ರಲ್ಲಿ ಸರ್ ಸಿ.ವಿ. ರಾಮನ್ ಅವರು ‘ರಾಮನ್ ಪರಿಣಾಮ’ (Raman Effect) ಆವಿಷ್ಕರಿಸಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ವಿಜ್ಞಾನದ ಮಹತ್ವಅದರ ಅನ್ವಯಗಳು ಮತ್ತು ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದುಹಾಗೆಯೇ ಯುವ ಪೀಳಿಗೆಯನ್ನು ವಿಜ್ಞಾನದತ್ತ ಆಕರ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.ಜನಸಾಮಾನ್ಯರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವದ ಬಗ್ಗೆ ಅರಿವು ಮೂಡಿಸುವುದು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು
ವಿಜ್ಞಾನ ಕ್ಷೇತ್ರದಲ್ಲಿನ ಹೊಸ ಸಂಶೋಧನೆಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸುವುದು.
ಕುರುಡು ನಂಬಿಕೆಗಳನ್ನು ಹೋಗಲಾಡಿಸಿ ತಾರ್ಕಿಕ ಚಿಂತನೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು. ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿಯವರು ಮಾತನಾಡಿ1928 ರ ಫೆಬ್ರವರಿ 28 ರಂದು ಭಾರತೀಯ ಭೌತಶಾಸ್ತ್ರಜ್ಞ ಸ‌ರ್ ಚಂದ್ರಶೇಖರ ವೆಂಕಟ ರಾಮನ್ ಅವರು ‘ರಾಮನ್ ಪರಿಣಾಮ’ವನ್ನು ಕಂಡುಹಿಡಿದರು. ಈ ಆವಿಷ್ಕಾರಕ್ಕಾಗಿ 1930 ರಲ್ಲಿ ಅವರಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಯಿತು, ಇದು ವಿಜ್ಞಾನದಲ್ಲಿ ನೊಬೆಲ್ ಪಡೆದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಯಿತು. ಈ ಮಹತ್ತರ ಸಾಧನೆಯ ನೆನಪಿಗಾಗಿ, 1986 ರಲ್ಲಿ ಭಾರತ ಸರ್ಕಾರವು ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಘೋಷಿಸಲಾಯಿತು.ವಿಜ್ಞಾನವು ದೇಶದ ಪ್ರಗತಿಗೆ ಬೆನ್ನೆಲುಬಾಗಿದೆ. ರಾಷ್ಟ್ರೀಯ ವಿಜ್ಞಾನ ದಿನವು ಕೇವಲ ಒಂದು ಆಚರಣೆಯಲ್ಲ, ಬದಲಾಗಿ ವಿಜ್ಞಾನದ ಮೂಲಕ ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಮತ್ತು ವೈಜ್ಞಾನಿಕವಾಗಿ ಮುಂದುವರಿದ ಸಮಾಜವನ್ನು ರೂಪಿಸುವ ನಮ್ಮ ಬದ್ಧತೆಯನ್ನು ನೆನಪಿಸುವ ದಿನವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಮಾನವನ ಹೃದಯ, ವಿಸರ್ಜನಾಂಗ ವ್ಯೂಹ, ಜೀರ್ಣಾಂಗ ವ್ಯೂಹ,ನಿಂಬೆ ಹಣ್ಣಿನಿಂದ ಲೈಟ್ ಬೆಳಗುವುದು, ಸಾಂದ್ರತೆ,ಸೂಪಾ ಡ್ಯಾಂ, ಚಂದ್ರಯಾನ,ಜಲಚಕ್ರ,ಸಸ್ಯದ ಜೀವನ ಚಕ್ರ,ಗಾಳಿಗೆ ತೂಕವಿದೆ,ಮಳೆ ನೀರಿನ ಕೊಯ್ಲು,ಮಣ್ಣಿನ ಪದರಗಳು, ದ್ಯುತಿ ಸಂಶ್ಲೇಷಣೆ ಕ್ರಿಯೆ,ವಾಯು ಮಾಲಿನ್ಯ,ಭೂಮಿಯ ಮೇಲಿನ ಪದರಗಳು,ಸೌರ ಮಂಡಲ, ಕಾಲಗಳು ಕುರಿತಾದ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಅದರ ವಿವರವಾದ ಮಾಹಿತಿಯನ್ನು ನೀಡಿದರು. ರಾಮನಗರ ಪ್ರೌಢಶಾಲೆಯ ಸಹ ಶಿಕ್ಷಕರಾದ ಗುರವ ಸರ್, ರಾಠೋಡ್ ಸರ್, ಜೋಶಿ ಮೇಡಂ ನಿರ್ಣಾಯಕರಾಗಿ ಆಗಮಿಸಿ ಮಕ್ಕಳು ಮಾಡಿದ ಮಾದರಿಗಳನ್ನು ನೋಡಿ ಅಂಕಗಳನ್ನು ಕೊಟ್ಟು ಪ್ರಥಮ ದ್ವಿತೀಯ ತೃತೀಯ ಆಯ್ಕೆ ಮಾಡಲು ಸಹಕಾರ ನೀಡಿದರು. ಪ್ರಥಮ ಬಹುಮಾನ ಅಪೂರ್ವ ಘನಶ್ಯಾಮ ಮಿರಾಶಿ,ದ್ವಿತೀಯ ಬಹುಮಾನ ಕುಮಾರಿ ಮೀನಾಕ್ಷಿ ಶಳ್ಕೆ, ತೃತೀಯ ಬಹುಮಾನ ಟೇಜಾ ನಾರಾಯಣ ಗಾವಡೆ ಪಡೆದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಯಿತು. ಶಾಲೆಯ ಸಹ ಶಿಕ್ಷಕಿಯರಾದ ನಾಗರತ್ನಾ ಮೊಗೇರ,ಅನಿಸ್ ಫಾತಿಮಾ,ಸುನಿತಾ ಆರ್,ಸಂಜನಾ ಮಿರಾಶಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ,ಸಹಕಾರ ನೀಡಿದರು. ಕೊನೆಯಲ್ಲಿ ಕಾರ್ಯಕ್ರಮದ ನಿರ್ಣಾಯಕರಾಗಿ,ಆಯೋಜನೆಗೆ ಸಹಕರಿಸಿದ ಎಲ್ಲರನ್ನು ಶಾಲೆಯ ಪರವಾಗಿ ಎಸ್ ಡಿ ಎಂ ಸಿ ಯವರ ಪರವಾಗಿ,ಸಹ ಶಿಕ್ಷಕ ವೃಂದದವರ ಪರವಾಗಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನ ಅಭಿನಂದನೆಗಳನ್ನು ಸಲ್ಲಿಸಿದರು.