ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂದ ಗ್ರಾಮದ ಬುಡಕಟ್ಟು ಕುಣಬಿ ಸಮಾಜ,ಇತರ ಸಮಾಜದ,ಹಿರಿಯರ ಮತ್ತು ಯುವಕರ ಸಮ್ಮೀಳಿತ ಸುಗ್ಗಿ (ಸಿಗ್ಮೋ) ಕುಣಿತದ ತಂಡವು ಈಗಾಗಲೇ ಈ ವರ್ಷದ ಸುಗ್ಗಿ ಕುಣಿತವನ್ನು ಆರಂಭಿಸಿದೆ.
ಹೋಳಿ ಹುಣ್ಣಿಮೆ ಸಮೀಪಿಸುತ್ತಿದ್ದಂತೆ.ಸುಗ್ಗಿಯ ಸಂಭ್ರಮ ಹೆಚ್ಚುತ್ತಿದೆ. ತಮ್ಮ ಸಾಂಪ್ರದಾಯಿಕ ಕಲೆಯಾದ ಸುಗ್ಗಿ ಕುಣಿತವನ್ನು ಹೋಳಿ ಹಬ್ಬಕ್ಕೂ ಮುಂಚಿತವಾಗಿ ಸುಗ್ಗಿ ಕಟ್ಟುವ ತಂಡ ಬಳಿಕ ಊರೂರು ಸುತ್ತುತ್ತಾ ತಮ್ಮ ಸಮಾಜ, ಹಾಗೂ ಸಾರ್ವಜನಿಕ ಸ್ಥಳ ಹಾಗೂ ಮನೆ-ಮನೆಗೆ ತೆರಳಿ ಕುಣಿತದ ಪ್ರದರ್ಶನ ನಡೆಸುತ್ತಾರೆ.
ಹೋಳಿ ಹುಣ್ಣಿಮೆಯವೆರೆಗೂ ಸುಗ್ಗಿ ಕುಣಿತವನ್ನು ನೇರವೇರಿಸುತ್ತಾರೆ. ಗ್ರಾಮ ದೇವರಿಗೆ,ಮಾಂಡನಲ್ಲಿ, ಪೂಜೆ ಸಲ್ಲಿಸಿ, ಸಾಂಪ್ರದಾಯಿಕ ಉಡುಗೆ ತೊಟ್ಟು, ತಲೆಗೆ ಬಣ್ಣ ಬಣ್ಣದ ತುರಾಯಿ, ಪೇಟವನ್ನು ಕಟ್ಟಿ,ಪಗಡೆ,ವೇಷಭೂಷಣ ಧರಿಸಿ ಸುಗ್ಗಿ ಕುಣಿಯುವುದು ಎಲ್ಲರ ಮನಸೆಳೆಯುತ್ತದೆ. ಇದರೊಂದಿಗೆ ಗುಮಟೆ, ಜಾಗಟೆಯ ಸದ್ದು, ವಾದ್ಯಗಳ ಹಿಮ್ಮೇಳ ಸುಗ್ಗಿ ಕುಣಿತಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಒಮ್ಮೆ ವೇಷತೊಟ್ಟು ಹಣೆಗೆ ಗಂಧವನ್ನು ಇಟ್ಟುಕೊಂಡು ಕುಣಿತ ಮಾಡಿದಾಗ ಅವರು ನೀಡುವ ಕಾಣಿಕೆಗಳನ್ನು , ಊಟ ತಿಂಡಿ ಸ್ವೀಕರಿಸುವ ಪ್ರತೀತಿ ಇದೆ. ಸುಗ್ಗಿ(ಸಿಗ್ಮೋ)ಕುಣಿತದ ಸಂದರ್ಭದಲ್ಲಿ ದೇವ-ದೇವತೆಯರ,ಪ್ರಕೃತಿಯ ಕುರಿತಾದ ಹಾಡುಗಳನ್ನು ಹಾಡುವರು.
ಒಟ್ಟಿನಲ್ಲಿ ಒಂದು ವಾರಗಳ ಸುಗ್ಗಿಯ(ಸಿಗ್ಮೋ)ಸಂಭ್ರಮದ ವಾತಾವರಣ ಇರಲಿದೆ. ಪ್ರತಿ ವರ್ಷದಂತೆ ಊರಿನವರೆಲ್ಲಾ ಒಗ್ಗಟ್ಟಾಗಿ ಆಚರಿಸುವ ವಿಶೇಷ ಹಬ್ಬದಲ್ಲಿ ಹೋಳಿ ಹಬ್ಬವು ಒಂದಾಗಿದ್ದು, ಇದರಲ್ಲಿ ಸುಗ್ಗಿ (ಸಿಗ್ಮೋ) ಕುಣಿತದ ಆಚರಣೆಯು ಇದೆ. ಊರಿನವರೆಲ್ಲಾ ಒಗ್ಗಟ್ಟಾಗಿ ಆಚರಿಸುವ ಹಬ್ಬದ ಸುಗ್ಗಿ ತಂಡದಲ್ಲಿ ಹಿರಿಯರ,ಯುವಕರ ಸಮ್ಮೀಳಿತ ತಂಡವು ಮುಂದಿನ ಪೀಳಿಗೆಗೆ ಆಚರಣೆಯನ್ನು ಮುಂದುವರೆಸಲು ಅನುಕೂಲ.(ಲಕ್ಷ್ಮಣ ಬರ್ಸೇಕರ, ಗುಂದ, ಜೋಯಿಡಾ, ಊರಿನ ಪ್ರಮುಖರು).
