ಸುದ್ದಿ ಕನ್ನಡ ವಾರ್ತೆ
ಶಿರಸಿ: ಜೇವರ್ಗಿಯ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘದ ವತಿಯಿ೦ದ ಮಾರಿಕಾಂಬಾ ದೇವಿಯ ಜಾತ್ರಾ ನಿಮಿತ್ತ ನಗರದ ಗೋವಿಂದರಾವ ಹಾಲ್ ಪಕ್ಕದಲ್ಲಿ “ಮುತ್ತಿನಂಥ ಅತ್ತಿಗೆ” ಸಾಮಾಜಿಕ, ಹಾಸ್ಯ ಭರಿತ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರಂಗಭೂಮಿ ಕಲಾವಿದೆ ಸುಜಾತಾ ಜೇವರ್ಗಿ ತಿಳಿಸಿದರು.
ಅವರು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜೇವರ್ಗಿ ರಾಜಣ್ಣ ಬರೆದು, ನಿರ್ದೇಶಿಸಿದ 14 ನೇ ನಾಟಕವು ರೈತ ಮನೆತನದ ಕಥೆಯಾಗಿದ್ದು, ಬಡತನದಲ್ಲಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಸಂದೇಶ ಸಾರುತ್ತದೆ. ಕುಟುಂಬ ಸಹಿತ ನೋಡುವ ಅಶ್ಲೀಲ ರಹಿತ ನಾಟಕವಾಗಿದ್ದು, ನಾಟಕ ಕಂಪೆನಿ ಮೂರು ತಿಂಗಳು ವಾಸ್ತವ್ಯ ಹೂಡಲಿದೆ. ಪ್ರತಿದಿನ ಸಂಜೆ 6.15 ಮತ್ತು 9.30 ಗಂಟೆಗೆ ಪ್ರದರ್ಶನ ನಡೆಯಲಿದೆ ಎ೦ದರು.
ಕಾಮಿಡಿ ಕಿಲಾಡಿ ಖ್ಯಾತಿಯ ಮಾರುತಿ ಶೆಟ್ಟಿ, ಅವಿನಾಶ ಅಕ್ಕಲಕೋಟ, ಸುಜಾತಾ ಜೇವರ್ಗಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ವೀಕ್ಷಿಸಿ, ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು.
ಬಸವಲಿಂಗಪ್ಪ ಕೊಡ್ಲಿ, ಮಾರುತಿ ಶೆಟ್ಟಿ, ಸಿದ್ದರಾಮ ತಕರಾಣಿ, ಬಸವರಾಜ ಯಾವಗಲ್, ಮಹಾಂತಗೌಡ ಬಿರಾದರ, ಧನರಾಜ, ಅವಿನಾಶ ಅಕ್ಕಲಕೋಟ, ರಾಘವೇಂದ್ರ ಮುದೋಳ ಮತ್ತಿತರರು ಇದ್ದರು.
