ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಶ್ರೀ ರಾಮಲಿಂಗ ದೇವರ ಮಹಾರಥೋತ್ಸವ ಜೈ ಶ್ರೀರಾಮ,ಜೈ ಜೈ ಶ್ರೀರಾಮ ಎಂಬ ಘೋಷಣೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಶ್ರೀ ರಾಮಲಿಂಗ ದೇವಸ್ಥಾನದಿಂದ ಆರಂಭವಾದ ಅಲಂಕೃತ ರಥವು ಮುಂಭಾಗದಲ್ಲಿರುವ ಶ್ರೀ ಹನುಮಾನ ಮಂದಿರದವರೆಗೆ ಹೋಗಿ ನಂತರ ದೇವಸ್ಥಾನದ ಎದುರಿಗೆ ನಿಂತಿತು.ಈ ಸಂದರ್ಭದಲ್ಲಿ ಭಕ್ತರು ಬಾಳೆಹಣ್ಣು,ಸಂತರಾ,ಮುಸಂಬಿ,ಉತ್ತತ್ತಿಗಳನ್ನು ರಥಕ್ಕೆ ಸಮರ್ಪಿಸಿದರು. ಶ್ರೀ ದೇವರಿಗೆ ಭಕ್ತರು ಅರ್ಪಿಸಿದ ಕಾಣಿಕೆಗಳ ಸವಾಲ್ ಕಾರ್ಯಕ್ರಮ ನಡೆಯಿತು. ಭಕ್ತರು ತಾವು ತಂದ ಹೂವು ಹಣ್ಣು, ಕಾಯಿಗಳನ್ನು ಶ್ರೀ ದೇವರ ಸನ್ನಿಧಿಯಲ್ಲಿ ಅರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಕ್ತಿಯಿಂದ ಬೇಡಿಕೊಂಡರು. ದೇವಸ್ಥಾನದ ಅರ್ಚಕ ವೃಂದದವರು ಭಕ್ತರು ತಂದ ಕಾಣಿಕೆಗಳನ್ನು ಸ್ವೀಕರಿಸಿ ಎಲ್ಲರಿಗೂ ತೀರ್ಥ ಪ್ರಸಾದ ವಿತರಣೆಯನ್ನು ಮಾಡಿದರು. ರಥೋತ್ಸವದ ಸಂದರ್ಭದಲ್ಲಿ ತಾಲೂಕಿನ ಪ್ರಮುಖ ಗಣ್ಯರು, ಅಧಿಕಾರಿ ವರ್ಗದವರು, ಸ್ಥಳೀಯ ಗ್ರಾಮ ಪಂಚಾಯತ ನಿಕಟಪೂರ್ವ ಜನಪ್ರತಿನಿಧಿಗಳು, ತಾಲೂಕಿನಲ್ಲದೇ,ನೆರೆಯ ಬೆಳಗಾವಿ ಜಿಲ್ಲೆಯ, ಗೋವಾ,ಮಹಾರಾಷ್ಟ್ರ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಭವ್ಯ ರಥೋತ್ಸವದ ಸಾಕ್ಷಿಯಾದರು. ದೇವಸ್ಥಾನದ ಸಮಿತಿಯವರು ತಾಲೂಕಾ ಆಡಳಿತದ ಮಾರ್ಗದರ್ಶನದಲ್ಲಿ ಸ್ಥಳೀಯ ಗ್ರಾಮ ಪಂಚಾಯತ,ಆರೋಗ್ಯ ಇಲಾಖೆ,ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಮಹಾರಥೋತ್ಸವ ಯಶಸ್ವಿಯಾಗಿ ಸಂಪನ್ನಗೊಳಿಸಿದರು.

ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರಾಮನಗರ ಪೋಲೀಸ್ ಠಾಣೆಯ ಅಧಿಕಾರಿ,ಸಿಬ್ಬಂದಿ ವರ್ಗದವರು ಸೂಕ್ತ ಬಂದೋಬಸ್ತ ಕಲ್ಪಿಸುವ ಮೂಲಕ ರಥೋತ್ಸವದ ಯಶಸ್ಸಿಗೆ ಸಹಕಾರ ನೀಡಿದರು. ಪೂಜಾ ಸಾಮಗ್ರಿಗಳ,ವಿವಿಧ ತಿಂಡಿತಿನಿಸಿನ,ತಂಪು ಪಾನೀಯ, ಹೆಣ್ಣು ಮಕ್ಕಳ ಅಲಂಕಾರಿಕ ವಸ್ತುಗಳ,ಮಕ್ಕಳ ಆಟಿಕೆಯ ವಸ್ತುಗಳ,ದಿನಬಳಕೆಯ ವಸ್ತುಗಳ ವ್ಯಾಪಾರ ಮಳಿಗೆಗಳಲ್ಲಿ ಭರ್ಜರಿಯ ವ್ಯಾಪಾರ ಮುಂದುವರೆದಿದೆ.ಅದೇ ರೀತಿಯಾಗಿ ಅಮ್ಯೂಸ್ ಮೆಂಟ್ ಪಾರ್ಕ್ ನ ಚಟುವಟಿಕೆಗಳಲ್ಲಿ ಎಲ್ಲಾ ವರ್ಗದ ಜನರು ಮನರಂಜನೆಯನ್ನು ಸಂಜೆಯ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಲಿದ್ದಾರೆ. ರಾತ್ರಿಯ ವೇಳೆ ಜ್ಯೋತಿಬಾ ನಾಟ್ಯ ಮಂಡಲದ ವತಿಯಿಂದ ಮರಾಠಿ ನಾಟಕದ ಪ್ರದರ್ಶನ ನಡೆಯಲಿದೆ. ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಫೆ. 26 ರವರೆಗೆ ಮುಂದುವರೆಯಲಿದೆ. ಒಟ್ಟಿನಲ್ಲಿ ರಾಮನಗರದ ಶ್ರೀ ರಾಮಲಿಂಗ ದೇವರ ಮಹಾರಥೋತ್ಸವವು ಹಬ್ಬದ ವಾತಾವರಣ ನಿರ್ಮಾಣವಾಗಿ ಅದ್ಧೂರಿಯಾಗಿ ಸಂಪನ್ನಗೊಂಡಿತು.