ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಎರಡನೇಯ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಶ್ರೀ ರಾಮಲಿಂಗ ದೇವರ ಮಹಾರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಶ್ರೀ ರಾಮಲಿಂಗ ದೇವರ ದೇವಸ್ಥಾನದ ಆವರಣವು ಜೊತೆಯಲ್ಲಿ ಇನ್ನುಳಿದ ಪರಿವಾರ ದೇವತೆಗಳ,ಹನುಮಾನ ಮಂದಿರಗಳು ತಳಿರು ತೋರಣ, ಕೇಸರಿ ಬಾವುಟ,ಪತಾಕೆಗಳು, ಅಲಂಕೃತ ವಿದ್ಯುತ್ ದೀಪಗಳು, ರಂಗೋಲಿಗಳಿಂದ ಕಂಗೊಳಿಸುತ್ತಿದೆ.ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಈ ವರ್ಷದ ಮಹಾರಥೋತ್ಸವಕ್ಕೆ ಇಲ್ಲಿನ ಭಕ್ತರು,ಪರ ಊರಿನ ಭಕ್ತರು ಕಾತರರಾಗಿದ್ದಾರೆ. ದೇವಸ್ಥಾನ ಸಮಿತಿಯ ಪದಾಧಿಕಾರಿಗಳು,ಪುರೋಹಿತರ ನೇತೃತ್ವದಲ್ಲಿ ಭಕ್ತರ ಉಪಸ್ಥಿತಿಯಲ್ಲಿ ಈಗಾಗಲೇ ಅಲಂಕೃತ ಕೇಸರಿ ಬಾವುಟ, ಬಾಳೆಗೂನೆಯೊಂದಿಗಿನ ಬಾಳೆ ಗಿಡ,ಹೂವಿನ ಹಾರದಿಂದ ಶ್ರಂಗಾರಗೊಂಡ ಭವ್ಯ ರಥದಲ್ಲಿ ಶ್ರೀ ರಾಮಲಿಂಗ ದೇವರ ರಥಾರೋಹಣ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೇರವೇರಿಸಿ ಶ್ರೀ ದೇವರು ವಿರಾಜಮಾನರಾಗಿದ್ದಾರೆ. ಅಲ್ಲದೇ ಪೂಜಾ ಸಾಮಗ್ರಿಗಳ, ಗೋಬಿ ಮಂಚೂರಿ,ವಿವಿಧ ತರಹದ ಭಜಿಗಳ ಇನ್ನಿತರ ತಿಂಡಿತಿನಿಸಿನ, ದಿನಬಳಕೆಯ ವಸ್ತುಗಳ,ತಂಪು ಪಾನೀಯ,ದೇಶಿಯ ಪಾನೀಯಗಳಾದ ಎಳೆನೀರು, ಕಬ್ಬಿನ ಹಾಲು,ಹೆಣ್ಣು ಮಕ್ಕಳ ಅಲಂಕಾರಿಕ ವಸ್ತುಗಳ,ಮಕ್ಕಳ ಆಟಿಕೆಯ ವಸ್ತುಗಳ ಇನ್ನಿತರ ವಸ್ತುಗಳ ವ್ಯಾಪಾರ ಮಳಿಗೆಗಳ ವ್ಯಾಪಾರಸ್ಥರು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ಇದ್ದಾರೆ. ದೇವಸ್ಥಾನದ ಆವರಣದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ಹಲವು ತರಹದ ಎಲ್ಲಾ ವರ್ಗದ ಜನರಿಗೆ ಮನರಂಜನೆಯನ್ನು ನೀಡುವ ಚಟುವಟಿಕೆಗಳು ಎಲ್ಲರ ಗಮನ ಸೆಳೆಯುತ್ತಿದೆ. ಶ್ರೀ ರಾಮಲಿಂಗ ದೇವರ ದೇವಸ್ಥಾನವು ಈ ಹಿಂದೆ ಸೂಪಾದಲ್ಲಿತ್ತು.ಸುಮಾರು ಎಂಟು ನೂರು ವರ್ಷಗಳ ಕಾಲ ಹಳೆಯದು ಎಂಬ ಇತಿಹಾಸವುಳ್ಳ,ಎರಡು ನೂರು ಐವತ್ತು ವರ್ಷಗಳ ದಾಖಲೆಯುಳ್ಳ,ಹಿಂದಿನ ಶಿರಸಿಯ ಸೊಂದೇ ಮಹಾರಾಜರ ಕಾಲದಲ್ಲಿ ಆಡಳಿತದ ಸುರ್ಪದಿಯಲ್ಲಿದ್ದ ದೇವಸ್ಥಾನವಾಗಿದೆ.ಆ ಪರಿಸರದಲ್ಲಿ ಕೋಟೆಯು ಇದ್ದಿತ್ತು,ಬಹುತೇಕ ಅದು ಶಿವಾಜಿ ಮಹಾರಾಜರ ಕಾಲದಲ್ಲಿ ನಿರ್ಮಿಸಲಾದ ಕೋಟೆ ಅದಾಗಿರಬಹುದು.1981 ರಲ್ಲಿ ಈ ದೇವಸ್ಥಾನವನ್ನು ರಾಮನಗರದಲ್ಲಿ ಸ್ಥಾಪಿಸಲಾಯಿತು.ಅಂದಿನಿಂದ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಎಲ್ಲರ ಸಹಕಾರದಿಂದ ನಡೆಸಿಕೊಂಡು ಬಂದಿದ್ದೇವೆ. ದೇವಸ್ಥಾನವು ಎಲ್ಲರ ಸಹಕಾರದಿಂದ ಅಭಿವೃದ್ಧಿ ಹೊಂದಿದ್ದು,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಕೈಗೊಳ್ಳುವ ಉದ್ದೇಶ ಇದೆ. ಶಿವರಾತ್ರಿಯ ದಿನದಿಂದ ಪ್ರಾರಂಭವಾಗುವ ಜಾತ್ರಾ ಮಹೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು,ಮನರಂಜನೆಗಾಗಿ ಆರ್ಕೆಸ್ಟ್ರಾ,ಡಾನ್ಸ್ ಕಾರ್ಯಕ್ರಮ,ನಾಟಕಗಳ ಪ್ರದರ್ಶನ ನಡೆಯುತ್ತಿವೆ. ಇಂದು ನಡೆಯುವ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಎಲ್ಲಾ ಭಕ್ತರು ಪಾಲ್ಗೋಳ್ಳಿ ಎಂದು ಮಾಧ್ಯಮದ ಮೂಲಕ ಹಿರಿಯರು, ಸಾಮಾಜಿಕ ಕಾರ್ಯಕರ್ತರು,ದೇವಸ್ಥಾನ ಸಮಿತಿಯ ಪ್ರಮುಖರು ಆದ ಗುರುನಾಥ ಕಾಮತ್ ವಿನಂತಿಸಿಕೊಂಡಿದ್ದಾರೆ.