ಸುದ್ದಿ ಕನ್ನಡ ವಾರ್ತೆ
ಮುಂಡಗೋಡ: ತಾಲೂಕಿನ ಮಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಳಗಿ ಅರಣ್ಯ ಪ್ರದೇಶದಲ್ಲಿ ರುಂಡವಿಲ್ಲದ ಮಹಿಳೆಯ ಬೆತ್ತಲೆ ಮೃತ ದೇಹ ಪತ್ತೆಯಾದ ಸ್ಥಳಕ್ಕೆ ಶನಿವಾರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಂ.ಎನ್ ದೀಪನ್ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು.

ಮಹಿಳೆಯನ್ನು ಎರಡು ಮೂರು ದಿನಗಳ ಹಿಂದೆಯೇ ಹತ್ಯೆ ಮಾಡಿ ಅರಣ್ಯದಲ್ಲಿ ಎಸೆದಿರಬಹುದು ಎಂದು ಶಂಕಿಸಲಾಗಿದ್ದು, ಮಹಿಳೆಯ ಗುರುತು ಪತ್ತೆಯಾಗಬಾರದೆಂಬ ಉದ್ದೇಶದಿಂದ ಹಂತಕರು ಮಹಿಳೆಯ ರುಂಡವನ್ನು ಹೊತ್ತೊಯ್ದಿದ್ದಾರೆ ಎನ್ನಲಾಗುತ್ತಿದೆ. ಮಹಿಳೆಯ ರುಂಡದ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಪೊಲೀಸರು ತನಿಖೆ ಚುರುಕುಗೊಂಡಿದ್ದು, ಇದುವರೆಗೂ ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಶ್ವಾನದಳ ಕೂಡ ಸ್ಥಳ ಪರಿಶೀಲಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಪತ್ತೆಯಾದ ಮಹಿಳೆಯರ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ಈಗ ಪೊಲೀಸರು ತೊಡಗಿದ್ದಾರೆ.

ಪೊಲೀಸ್‌ ಪ್ರಕಟಣೆ: ಮುಂಡಗೋಡ ತಾಲೂಕಿನ ಮಳಗಿ ಬಳಿಯ ಕೊಳಗಿ
ಗ್ರಾಮಕ್ಕೆ ಹೋಗುವ ದಾರಿಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಈ ರೀತಿಯಾಗಿ ಅಪರಿಚಿತ ಸುಮಾರು 40 ರಿಂದ 50 ವರ್ಷದ ಹೆಂಗಸಿನ ರುಂಡವಿಲ್ಲದ ಶವ ಸಿಕ್ಕಿದ್ದು, ಕೊರಳಲ್ಲಿ ಲಿಂಗದಕಾಯಿ (ಶಿವದಾರದ ಜೊತೆಗೆ) ಇದ್ದು ಅಂದಾಜು 5 ಫೂಟ್ ಎತ್ತರ, ಗೋದಿ ಬಣ್ಣ ಹೊಂದಿದ್ದು ಯಾವುದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾರದಿಂದ ಮಹಿಳೆ ಮಿಸ್ಸಿಂಗ್ ಪ್ರಕರಣಗಳು ಈ ಕಳೆಬರಹಕ್ಕೆ ಹೋಲಿಕೆ ಆಗುತ್ತಿದ್ದಲ್ಲಿ ತಿಳಿಸಲು ಪ್ರಕಟಣೆ ಹೊರಡಿಸಿದೆ.