ಸುದ್ದಿ ಕನ್ನಡ ವಾರ್ತೆ

. ಯಲ್ಲಾಪುರ: ಪಟ್ಟಣದ ಗ್ರಾಮದೇವಿ ಜಾತ್ರೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಣೆಯ ಮೂಲಕ ಜನಮೆಚ್ಚುಗೆ ಪಡೆದ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಪಟ್ಟಣದ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಶಾಸಕ ಶಿವರಾಮ ಹೆಬ್ಬಾರ ಸನ್ಮಾನಿಸಿ, ಅಭಿನಂದಿಸಿದರು.
ನಂತರ ಮಾತನಾಡಿದ ಅವರು,9 ದಿನಗಳ ಕಾಲ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಟ್ರಾಫಿಕ್ ಸಮಸ್ಯೆ ಉಂಟಾಗದಂತೆ, ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಜಾತ್ರೆಯ ಯಶಸ್ಸಿನಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದ್ದು, ಈ ಮೂಲಕ ಸರ್ಕಾರಕ್ಕೆ, ಊರಿಗೆ ಹಾಗೂ ನನಗೆ ಒಳ್ಳೆಯ ಹೆಸರು ಬರಲು ಕಾರಣರಾಗಿದ್ದಾರೆ.
ಯಲ್ಲಾಪುರ ಹಾಗೂ ಹೊರ ಊರುಗಳಿಂದ ಬಂದ 400 ಕ್ಕೂಹೆಚ್ಚು ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಇಲಾಖೆಗೂ ಗೌರವ ತರುವ ಕೆಲಸ ಮಾಡಿದ್ದಾರೆಂದು ಶ್ಲಾಘಿಸಿದರು. ಸಿಪಿಐಗಳಾದ ರಮೇಶ ಹಾನಾಪುರ,ರಂಗನಾಥ ನೀಲಮ್ಮನವರ್, ಪಿಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಎಸ್.ವಿ.ಚೌಹಾಣ, ಮಹಾವೀರ ಕಾಂಬಳೆ, ದೇವೇಂದ್ರನಾಯ್ಕ, ರತ್ನಾ ಕುರಿ, ನಾರಾಯಣ ರಾಠೋಡ, ಶ್ರೀಕಾಂತ ರಾಠೋಡ, ಮಂಜುನಾಥ ಪಾಟೀಲ, ರವೀಂದ್ರ ಬಿರಾದಾರ, ವಸಂತ ಅಕ್ಕಸಾಲಿ ಅವರನ್ನು ಶಾಸಕರು ವೈಯಕ್ತಿಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ರಾಘವೇಂದ್ರ ಗೊಂದಿ,ಯುವ ಕಾಂಗ್ರೆಸ್ ಅಧ್ಯಕ್ಷ ಗಣೇಶ ಹೆಗಡೆ ಸವಣಗೇರಿ ಇನ್ನಿತರರು ಇದ್ದರು.