ಸುದ್ದಿ ಕನ್ನಡ ವಾರ್ತೆ
ಶಿರಸಿ: ಎಡೆಬಿಡದೇ ಸುರಿಯುತ್ತಿರುವ ಮಳೆಯ ನಡುವೆ ಮತ್ತಿಘಟ್ಟ ಬಳಿಯ ಜಲಪಾತದಲ್ಲಿ ತೇಲಿಹೋಗಿದ್ದಾನೆ ಎಂದು ಶಂಕಿಸಲಾದ ಯುವಕನ ಪತ್ತೆಗೆ ಎರಡ‌ನೇ ದಿನ ಸೋಮವಾರ ಕೂಡ ರಾತ್ರಿ ತನಕ ಹುಡುಕಾಟ ನಡೆಯಿತು.
ಗಾಳಿ ಮಳೆಯ‌ ನುಡವೆ, ಕಾಡಿನಲ್ಲಿ ಇರುವ ಜಲಪಾತದ ಸಮೀಪ ಪೊಲೀಸರು, ಸ್ಥಳೀಯರು, ಮುಳಗು ತಜ್ಞರು ಹುಡುಕಾಟ ನಡೆಸಿದರು.

ತಾಲೂಕಿನ ಮತ್ತಿಘಟ್ಟ ಬಳಿಯ ಜೋಗನ ಹಕ್ಕಲ ಫಾಲ್ಸ್ ನಲ್ಲಿ ಕಾಣೆಯಾಗಿರುವ ಉಂಬಳೆಕೊಪ್ಪದ ಪವನ್ ಗಣಪತಿ ಜೋಗಿ ಹುಡುಕಲು ಮಳೆಯನ್ನೂ ಲೆಕ್ಕಿಸದೇ ಹರಸಾಹಸ ಪಡುತ್ತಿದ್ದಾರೆ. ಪವನ್ ಕಾಣೆಯಾಗಿರುವ ಪ್ರದೇಶ ಎಷ್ಟೊಂದು ದುರ್ಗಮವಾಗಿದೆ ಎಂದರೇ ಯಾರಿಗಾದರೂ ಏನಾದರೂ ತಿಳಿಸಲು ಸಿಗ್ನಲ್ ಕೂಡಾ ಇಲ್ಲವಾಗಿದೆ. ದಟ್ಟ ಕಾನನದ ನಡುವೆ ಹರಿದು ಹೋಗಿರುವ ಫಾಲ್ಸ್ ಹಳ್ಳದಲ್ಲಿ ಕಣ್ಮರೆಯಾಗಿರುವ ಪವನ್ ಹುಡುಕಾಟ ನಡೆದಿದ್ದು ಮಳೆ ಕಾರ್ಯಚರಣೆಗೆ ದೊಡ್ಡ ತೊಡಕನ್ನು ಉಂಟು ಮಾಡಿದೆ.
ರವಿವಾರ ಸಂಜೆಯಿಂದ ಪ್ರಾರಂಭವಾದ ಕಾರ್ಯಚರಣೆ ಸೋಮವಾರ ಕೂಡ ನಡೆಯುತ್ತಿದ್ದು ಪವನ್ ಪಾಲಕರು ಆತಂಕಕ್ಕೆ ಈಡಾಗಿದ್ದಾರೆ. ಪವನ್ ತನ್ನ ಸ್ನೇಹಿತ ವಾಸುದೇವ ನಾಯ್ಕ ಜೊತೆ ಬೆಳಿಗ್ಗೆ 11.30 ರ ಸುಮಾರಿಗೆ ಮತ್ತಿಘಟ್ಟಾ ಹತ್ತಿರದ ಫಾಲ್ಸ್ ಹೋಗಿ ಅಲ್ಲಿ ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಕಣ್ಣರೆಯಾಗಿದ್ದನು.