ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಪ್ರಸಿದ್ದ ಕಾಳಮ್ಮ-ದುರ್ಗಮ್ಮ ದೇವಿ ಜಾತ್ರಾ ಮಹೋತ್ಸವವು ಅತ್ಯಂತ ಸಡಗರದಿಂದ ಮುಂದುವರಿದಿದ್ದು, ಮಂಗಳವಾರ ಬೆಳಿಗ್ಗೆಯಿಂದಲೇ ಭಕ್ತಸಾಗರ ಹರಿದುಬಂದಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಸುಡುಬಿಸಿಲನ್ನೂ ಲೆಕ್ಕಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸುದೀರ್ಘ ಸರತಿ ಸಾಲಿನಲ್ಲಿ ನಿಂತು ದೇವಿಯರಿಗೆ ಉಡಿ ತುಂಬಿ, ಹಣ್ಣು-ಕಾಯಿ ಸಮರ್ಪಿಸಿ ಕೃತಾರ್ಥರಾದರು.

ಜಾತ್ರೆಯ ಪ್ರತಿದಿನವು ಬೆಳಿಗ್ಗೆ 7 ಗಂಟೆಯಿಂದಲೇ ಭಕ್ತರಿಗೆ ದೇವಿಯರ ದರ್ಶನ ಹಾಗೂ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜಾತ್ರೆಯ ಮುಕ್ತಾಯದ ದಿನಗಳು ಸಮೀಪ ಬರುತ್ತಿರುವದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ದೇವಸ್ಥಾನ ಸಮಿತಿಯ ವತಿಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥಿತವಾದ ಬ್ಯಾರಿಕೇಡ್ ಹಾಗೂ ನೆರಳಿನ ವ್ಯವಸ್ಥೆ ಮಾಡಲಾಗಿದೆ.

ಸೇವೆಯಲ್ಲಿ ತೊಡಗಿದ ಸಂಘ-ಸಂಸ್ಥೆಗಳು: ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸ್ಥಳೀಯ ಸಂಘ-ಸಂಸ್ಥೆಗಳು ಕೈಜೋಡಿಸಿವೆ. ತೀವ್ರವಾಗಿರುವ ಉಷ್ಣತೆಯ ಹಿನ್ನೆಲೆಯಲ್ಲಿ ಸಾಯಿಬಾಬಾ ಸಮಿತಿಯ ಸದಸ್ಯರು ಭಕ್ತಾದಿಗಳಿಗೆ ನಿರಂತರವಾಗಿ ತಂಪು ಪಾನಕ ವಿತರಣೆ ಮಾಡುತ್ತಿದ್ದಾರೆ. ಇನ್ನು ಲಾರಿ ಮಾಲಕರ ಸಂಘದ ವತಿಯಿಂದ ಭಕ್ತರಿಗೆ ದ್ರಾಕ್ಷಾ ಪ್ರಸಾದ ವಿತರಣೆ ಮಾಡಲಾಗುತ್ತಿದ್ದು,ಜೊತೆಗೆ ಅನ್ನಪ್ರಸಾದ ನಿರಂತರ ಇದ್ದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.