ಸುದ್ದಿ ಕನ್ನಡ ವಾರ್ತೆ
ಶಿರಸಿ: ಇಲ್ಲಿನ ಯಕ್ಷ ಸಂಭ್ರಮ ಟ್ರಸ್ಟ್ ನೀಡುವ ಹಿರಿಯ ತಾಳಮದ್ದಲೆ ಅರ್ಥಧಾರಿ ದಿ.ಚಂದುಬಾಬು ಅವರ ನೆನಪಿನಲ್ಲಿ ನೀಡಲಾಗುವ ಚಂದುಬಾಬು ಪ್ರಶಸ್ತಿಯನ್ನು ಯಕ್ಷಗಾನದ ಪ್ರಸಿದ್ಧ ಭಾಗವತ ವಿದ್ವಾನ್ ಗಣಪತಿ ಭಟ್ಟ ಅವರಿಗೆ ನೀಡಲು ತೀರ್ಮಾನಿಸಲಾಗಿದೆ.
ಟ್ರಸ್ಟ್ ಕೋಶಾಧ್ಯಕ್ಷ ಚಂದು ಸೀತಾರಾಮ ಅವರು ಪ್ರಕಟಿಸಿ ಅಕ್ಟೋಬರ್ ೧೨ರಿಂದ ೨೧ರ ತನಕ ನಗರದ ಟಿಎಂಎಸ್ ಸಭಾಂಗಣದಲ್ಲಿ ಪ್ರತಿ ದಿನ ಸಂಜೆ ೪ರಿಂದ ನಡೆಯುವ ಹತ್ತನೇ ವರ್ಷದ ತಾಳಮದ್ದಲೆ ಸಂದರ್ಭದಲ್ಲಿ ಅ.೨೦ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಮಾರಂಭದಲ್ಲಿ ಸ್ವರ್ಣವಲ್ಲೀ ಶ್ರೀಗಳು, ಮಾನವ ಹಕ್ಕು ಆಯೋಗದ ಅಧ್ಯಕ್ಷ ಟಿ.ಶ್ಯಾಂ ಭಟ್ ಭಾಗವಹಿಸಲಿದ್ದು, ಅಭಿನಂದನಾ ನುಡಿಯನ್ನು ವಾಸುದೇವ ರಂಗಾ ಭಟ್ಟ ಅವರು ಆಡಲಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನ ಭಾಗವತರಾಗಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಈಚೆಗಷ್ಟೇ ಯಕ್ಷಗಾನ ಅಕಾಡೆಮಿಯಿಂದ ಗಾನ ಸಂಹಿತೆ ಇವರ ಗ್ರಂಥಕ್ಕೆ ಅತ್ಯುತ್ತಮ ಗ್ರಂಥ ಪುರಸ್ಕಾರಕ್ಕೆ ಆಯ್ಕೆ ಆಗಿದೆ ಎಂಬುದೂ ಉಲ್ಲೇಖನೀಯ.
ಈ ವೇಳೆ ಪ್ರಮುಖರಾದ ಬಾಲಚಂದ್ರ ಹೆಗಡೆ, ಅಶೋಕ ಹಾಸ್ಯಗಾರ, ಶ್ರೀಕಾಂತ ಭಟ್ಟ, ಇಂದಿರಾ ಹೆಗಡೆ ಇತರರು ಇದ್ದರು.