ಶಿರಸಿ: ತಾಲೂಕಾ ಸುಧಾಪುರ ಕ್ಷೇತ್ರದ ಮುಂಡಿಗೆಕೆರೆ ಮಳೆಗಾಲದಲ್ಲಿ ಪಕ್ಷಿಗಳಿಗೆ ಆಶ್ರಯ ತಾಣವಾಗಿ ನೂರಾರು ವರ್ಷಗಳಿಂದ ಬೆಳ್ಳಕ್ಕಿಗಳ ವಂಶಾಭಿವೃದ್ಧಿ ತಾಣವಾಗಿ ಹೊರಹೊಮ್ಮಿದ್ದ ನಿಸರ್ಗ ನಿರ್ಮಿತ ಈ ಹೆರಿಗೆ ತಾಣಕ್ಕೆ ಈಚೆಗೆ ಬಿದ್ಧ ಗುಡುಗು, ಸಿಡಿಲು ಮಾರಕವಾಯಿತೇ ಎಂಬ ಆತಂಕ ಪಕ್ಷಿಪ್ರಿಯರಲ್ಲಿ ಮನೆ ಮಾಡಿದೆ.
ಪ್ರತಿವರ್ಷ ಮೇ ಕೊನೆಗೆ ಅಥವಾ ಜೂನ್ ಮೊದಲ ವಾರದಲ್ಲಿ ಸ್ಥಳೀಯ ಬೆಳ್ಳಕ್ಕಿಗಳು ಸುಮಾರು ೧೫ ರಿಂದಾ ೨೦ ಕಿ.ಮೀ. ವ್ಯಾಪ್ತಿಯಲ್ಲಿರುವ ಪಕ್ಷಿಗಳು ಇಲ್ಲಿಗೆ ಬಂದು ಮುಂಡಿಗೆ ಗಿಡಗಳ-ಗರಿಗಳ ಎಡೆಯಲ್ಲಿ ಕಡ್ಡಿಗಳನ್ನು ಇಟ್ಟು ಗೂಡು ಕಟ್ಟಿ-ಮೊಟ್ಟೆ ಇಟ್ಟು-ಮರಿಗಳಾದ ನಂತರ ಅವುಗಳಿಗೆ ಹಾರಾಟ ತರಬೇತಿ ನೀಡಿ ಪುಟ್ಟ ಕಂದಮ್ಮಗಳೊಂದಿಗೆ ಹಾರಿ ಹೋಗುತ್ತವೆ. ಜೂನ್ ತಿಂಗಳಿಂದ ೩ ಹಂತಗಳಲ್ಲಿ ಆಗಮಿಸುವ ಪಕ್ಷಿಗಳ ಗುಂಪು ಸುಮಾರು ೧೨೦ ರಿಂದಾ ೧೩೦ ದಿನಗಳವರೆಗೆ ಇಲ್ಲಿದ್ದು ಹಾರಿ ಹೋಗುವ ಸಂಪ್ರದಾಯ ಇತ್ತು.
ಪಕ್ಷಿಗಳೂ ಕಳೆದ ಜೂನ್ ೨೪ ಕ್ಕೆ ಕೆರೆಗೆ ಇಳಿದಿದ್ದು, ೩ ತಂಡಗಳು ಬೇರೆ ಬೇರೆ ದಿನಗಳಲ್ಲಿ ಕೆರೆ ಇಳಿದು ಗೂಡು ಕಟ್ಟಿದ್ದವು. ಕೆರೆಯ ತುಂಬೆಲ್ಲಾ ಸುಮಾರು ೮೦೦ ಕ್ಕೂ ಅಧಿಕ ಬೆಳ್ಳಕ್ಕಿ ಇರುವದು ಕಂಡು ಬಂದಿತ್ತು. ಆದರೆ ಅಗಸ್ಟ್ ೧೭ ರ ಇಳಿಹೊತ್ತು ೪ ರಿಂದಾ ೪.೩೦ ರವರೆಗೆ ಸುಧಾಪುರ ಕ್ಷೇತ್ರ ಹಾಗೂ ಮುಂಡಿಗೆ ಕೆರೆ ಸರಹದ್ದಿನಲ್ಲಿ ಅತ್ಯಧಿಕ ಗಾಳಿ-ಮಳೆ ಗುಡುಗು ಸಿಡಿಲುಗಳ ಆರ್ಭಟ ಜೋರಾಗಿತ್ತು. ಒಮ್ಮೆಲೆ ಆಗಸದಿಂದಾ ಸಿಡಿಲ ಚೆಂಡು ಉತ್ತರ ದಿಕ್ಕಿನಿಂದಾ ದಕ್ಷಿಣಕ್ಕೆ ಮುಂಡಿಗೆ ಕೆರೆಯತ್ತ ಸಾಗಿದ್ದು, ಸುತ್ತಲಿನ ಪರಿಸರದಲ್ಲಿ ಪ್ರಖರ ಬೆಳಕಿನ ಜ್ವಾಲೆ ಹರಡಿ, ಬಹುದೊಡ್ಡ ಶಬ್ದ ಕೇಳಿ, ಆತಂಕಗೊಂಡಿದ್ದಾಗಿ ಸ್ಥಳೀಯರು ಇದೀಗ ಶಂಕೆ ವ್ಯಕ್ತಪಡಿಸಿದ್ದಾರೆ.
ಅಂದು ಕೇವಲ ಅರ್ಧ ಘಂಟೆಯಲ್ಲಿ ೪೯.೨ ಮಿ.ಮೀ. ಮಳೆ ದಾಖಲಾಗಿದೆ. ಈ ವಿದ್ಯಮಾನದಿಂದಾಗಿ ಪಕ್ಷಿಗಳ ಹೆರಿಗೆ ತಾಣಕ್ಕೆ ಆತಂಕ, ಪಕ್ಷಿಗಳ ಚೀರಾಟ-ಗೋಳಾಟದ ಸದ್ದು ಮಳೆಯಲ್ಲಿ ಅಡಗಿಹೋಯಿತು. ಅಂದು ಕೆರೆಯಲ್ಲಿ ಬೆಳ್ಳಕ್ಕಿಗಳು ಬೆರಳೆಣಿಕೆಯಲ್ಲಿ ಕಂಡು ಬಂದವು. ಕೇವಲ ೫ ರಿಂದಾ ೬ ಗೂಡುಗಳಲ್ಲಿ ಮರಿಗಳೊಂದಿಗೆ ತಾಯಿ ಪಕ್ಷಿ ಕುಳಿತಿರುವದು ಕಂಡು ಬಂತು. ಉಳಿದಂತೆ ಎಲ್ಲ ಬೆಳ್ಳಕ್ಕಿಗಳು ಸಂತೋಷದಿಂದಾ ಕಟ್ಟಿದ ಗೂಡನ್ನು ದುಖಃದಿಂದಾ ಬಿಟ್ಟು ಹೋಗಿವೆ. ಮರಿಗಳ ಹಾರಾಟ-ಚಿರಾಟದಿಂದಾ ಸಂತೋಷ ಸಂಭ್ರಮದಲ್ಲಿರಬೇಕಿದ್ದ ಮುಂಡಿಗೆಕೆರೆ ಪಕ್ಷಿಧಾಮ ಇಂದು ಸೂತಕದ ಮನೆಯಂತಾಗಿದೆ. ಈ ವರ್ಷ ಜೂನ್ ನಿಂದಾ ಅಗಸ್ಟ್ ೧೯ ರವರೆಗೆ ೨೬೩೦ ಮಿ.ಮೀ. ಮಳೆಯಾಗಿದ್ದು, ಉತ್ತಮ ವಾತಾವರಣ ಇದ್ದರೂ, ಸಿಡಿಲಿನ ಆರ್ಭಟಕ್ಕೆ ಸಿಕ್ಕು ಬೆಳ್ಳಕ್ಕಿಗಳು ನಲುಗಿ ಹೋದವು. ಕೇವಲ ೫೪ ದಿನಗಳು ಇಲ್ಲಿದ್ದ ಬೆಳ್ಳಕ್ಕಿಗಳು ಅವಧಿಗೆ ಮುನ್ನವೇ ವಂಶಾಭಿವೃದ್ಧಿ ಕೈಗೊಳ್ಳದೆ ಹಾರಿ ಹೋಗಿದೆ ಎಂದು ಮುಂಡಿಗೆಕೆರೆ ನಿರ್ವಹಣೆಯ ಪ್ರಮುಖ ರತ್ನಾಕರ ಹೆಗಡೆ ಬಾಡಲಕೊಪ್ಪ ಪ್ರತಿಕ್ರಿಯೆ ನೀಡಿದ್ದಾರೆ.