ಸುದ್ದಿ ಕನ್ನಡ ವಾರ್ತೆ
ಸಾಗರ: ಅಡಕೆ ಬೆಳೆ ಮತ್ತು ಬೆಲೆ ಮೇಲೆ ಆಘಾತವಾದರೆ ಬೆಳೆಗಾರರು ಸಹಿಸಿಕೊಳ್ಳುವುದಿಲ್ಲ. ಇದೀಗ ಮಲೆನಾಡು ಭಾಗದಲ್ಲಿ ಅಡಕೆ ಬೆಳೆಗೆ ರೋಗಬಾಧೆ ಕಂಡು ಬಂದಿದ್ದರೆ ಅಡಕೆ ಕಾನೂನು ಸಂಕಷ್ಟ ಎದುರಿಸುವಂತೆ ಆಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ವಿಘ್ನೇಶ್ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ವತಿಯಿಂದ ಅಡಕೆ ಹಾನಿಕಾರಕವಲ್ಲ ಎಂಬ ವಿಷಯ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಅಡಕೆ ಬೆಳೆಗಾರ ಸುಧಾರಿಸಿಕೊಳ್ಳಲಾಗದಷ್ಟು ಸಂಕಷ್ಟ ಎದುರಾಗುತ್ತಿದೆ. ಕರೂರು ಭಾರಂಗಿ ಹೋಬಳಿ ಭಾಗದಲ್ಲಿ ವ್ಯಾಪಕವಾಗಿ ಹರಡಿರುವ ಎಲೆಚುಕ್ಕಿ ರೋಗದಿಂದ ಬೆಳೆಗಾರ ಕಂಗಾಲಾಗಿದ್ದಾನೆ. ಇದರ ಜೊತೆಗೆ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಅಂಶ ರೈತರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. ಅಡಕೆ ಸೇವನೆ ಮಾಡಿದರೆ ಕ್ಯಾನ್ಸರ್ ಬರುತ್ತದೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ಅಡಕೆ ಜೊತೆಗೆ ತಂಬಾಕು, ಆಲ್ಕೋಹಾಲ್ನಂತಹ ವಸ್ತು ಬೆರೆತಾಗ ಮಾತ್ರ ಅಡಕೆ ಮಾರಕವಾಗಬಹುದು. ಅಡಕೆ ಬೆಳೆ ಮೇಲೆ ಅನಗತ್ಯವಾಗಿ ದೂರುವುದು ನಿಲ್ಲಬೇಕು ಎಂದು ಹೇಳಿದರು.
ಪ್ರಾಚೀನ ಕಾಲದಿಂದಲೂ ಅಡಕೆಯನ್ನು ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಂಡು ಬಂದ ಅನೇಕ ಉದಾಹರಣೆಗಳಿವೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಸಹ ಇದನ್ನು ಸ್ಪಷ್ಟೀಕರಿಸಿದೆ. ಅಡಕೆಯಲ್ಲಿ ಔಷಧೀಯ ಗುಣ ಇದೆ. ಅಡಕೆ ಹಾನಿಕಾರಕ ಅಲ್ಲ ಎನ್ನುವುದನ್ನು ನಾವು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.
ಅಡಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ಮಾತನಾಡಿ, ರಾಜ್ಯದಲ್ಲಿ ಶೇ. ೫೦ರಷ್ಟು ಪ್ರದೇಶ ಅಡಕೆ ಬೆಳೆಯನ್ನು ಅವಲಂಬಿತ ಕುಟುಂಬಗಳಿವೆ. ಒಂದೊಮ್ಮೆ ಅಡಕೆ ಹಾನಿಕಾರಕ ಎನ್ನುವುದು ಬಿಂಬಿತವಾದರೆ ಅರ್ಧ ಕರ್ನಾಟಕದ ಆರ್ಥಿಕತೆ ನೆಲಕಚ್ಚುವ ಸಾಧ್ಯತೆ ಇದೆ. ಅಡಕೆ ಸಾಮಾನ್ಯ ಪ್ರಮಾಣದಲ್ಲಿ ಸೇವಿಸಿದರೆ ಅದು ಹಾನಿಕಾರಕವಲ್ಲ. ಅಡಕೆ ಜೊತೆ ತಂಬಾಕು ಸೇರಿಸಿ ಸೇವಿಸಿದರೆ ಅದು ಹಾನಿಕಾರಕ ಎಂದು ತಿಳಿಸಿದೆ. ಈ ಬಗ್ಗೆ ಇನ್ನಷ್ಟು ಚರ್ಚೆಯನ್ನು ಅಡಕೆ ಬೆಳೆಗಾರರ ಸಂಘ ಏರ್ಪಡಿಸಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿಜ್ಞಾನಿಗಳಾದ ಶಿರಸಿ ಟಿಎಂಎಸ್ನ ಡಾ. ಆದಿತ್ಯ ಹೆಗಡೆ, ಡಾ. ರವಿಕುಮಾರ್, ಡಾ. ಆತ್ರೇಯ, ಡಾ. ಜೀವನ್, ಡಾ. ಶಶಿಧರ್, ಪ್ರಮುಖರಾದ ಬಿ.ಆರ್.ಜಯಂತ್, ಗಣಪತಿ, ಯು.ಎಚ್.ರಾಮಪ್ಪ, ಎಲ್.ಟಿ.ತಿಮ್ಮಪ್ಪ, ಚೇತನರಾಜ್ ಕಣ್ಣೂರು ಇನ್ನಿತರರು ಹಾಜರಿದ್ದರು.
