ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ವಿಧಾನಸಭೆಯ ಸಭಾಪತಿ ಸ್ಥಾನಕ್ಕೆ ಆಡಳಿತ ಪಕ್ಷದಿಂದ ಶಾಸಕ ಗಣೇಶ್ ಗಾಂವಕರ್ ರವರು ಮಂಗಳವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಗಣೇಶ ಗಾಂವಕರ್ ಬಿಜೆಪಿ ಶಾಸಕರಾಗಿದ್ದಾರೆ. ರಮೇಶ ತವಡಕರ್ ರಾಜೀನಾಮೆ ನೀಡಿ ಮಂತ್ರಿ ಸ್ಥಾನ ಪಡೆದ ನಂತರ ಗೋವಾ ವಿಧಾನಸಭೆಯ ಸಭಾಪತಿಗಳ ಸ್ಥಾನ ಖಾಲಿ ಆಗಿತ್ತು. ಇದೀಗ ಈ ಸ್ಥಾನಕ್ಕೆ ಸಪ್ಟೆಂಬರ್ 25 ರಂದು ಚುನಾವಣೆ ನಡೆಯಲಿದೆ.
ಶಾಸಕ ಗಣೇಶ ಗಾಂವಕರ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್, ಬಿಜೆಪಿ ರಾಜ್ಯಾಧ್ಯಕ್ಷ ದಾಮು ನಾಯ್ಕ, ಸಚಿವ ವಿಶ್ವಜಿತ್ ರಾಣೆ, ಬಾಬುಸ್ ಮೊನ್ಸೆರಾತ್, ರಮೇಶ ತವಡಕರ್, ದಿವ್ಯಾ ರಾಣೆ, ರೋಹನ್ ಖಂವಟೆ, ಸುಭಾಷ ಶಿರೋಡಕರ್, ನೀಲಕಂಠ ಹಳರ್ಣಕರ್, ಸಚಿವ ಸುದೀನ್ ಧವಳೀಕರ್, ಉಪಸ್ಥಿತರಿದ್ದರು.
ಗಣೇಶ ಗಾಂವಕರ್ ರವರು ಬಹುಮತ ಪಡೆದು ಸಭಾಪತಿ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದರು. ಸಭಾಪತಿ ಸ್ಥಾನಕ್ಕೆ ಗಣೇಶ ಗಾಂವಕರ್ ನಾಮಪತ್ರ ಸಲ್ಲಿಸಿದ್ದಾರೆ. ನಮ್ಮೊಂದಿಗೆ ಎಂಜಿಪಿ ಪಕ್ಷದ ಸುದೀನ್ ಧವಳೀಕರ್, ಹಾಗೂ ಮೂವರು ಪಕ್ಷೇತರ ಶಾಸಕರಿದ್ದಾರೆ. ಇದರಿಂದಾಗಿ ಗಣೇಶ್ ಗಾಂವಕರ್ ರವರು ಬಹುಮತದೊಂದಿಗೆ ಸಭಾಪತಿಗಳಾಗಿ ಆಯ್ಕೆಯಾಗಲಿದ್ದಾರೆ. ಪ್ರತಿ ಪಕ್ಷಗಳಿಂದಲೂ ಈ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರೂ ಕೂಡ ಅವರ ಬಳಿಯೂ ಕೂಡ ಗಣೇಶ ಗಾಂವಕರ್ ರವರಿಗೆ ಮತ ಹಾಕುವಂತೆ ವಿನಂತಿಸುತ್ತೇನೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.