ಸುದ್ಧಿಕನ್ನಡ ವಾರ್ತೆ
ಗೋವಾದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಪರ್ವರಿಯ ಕೊಕೆರೊ ಸರ್ಕಲ್ ನಿಂದ ಮಾಲ್ ದೆ ಗೋವಾ ವರೆಗಿನ ರಸ್ತೆಯನ್ನು ಅಗಷ್ಟ 24 ರಿಂದ 31 ಜನವರಿ 26 ರ ವರೆಗೆ ಎಲ್ಲ ಪ್ರಕಾರದ ವಾಹನಗಳ ಓಡಾಟಕ್ಕೆ ಸಂಪೂರ್ಣವಾಗಿ ನಿಷೇಧ ಹೇರಲು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಈ ಕುರಿತಂತೆ ಲೋಕೋಪಯೋಗಿ ಇಲಾಖೆಯು ಕೊಂಚ ಬದಲಾವಣೆಯನ್ನು ಮಾಡಿದ್ದು ಈ ಮಾರ್ಗದಲ್ಲಿ ಓಡಾಟ ನಡೆಸುವ ಜನತೆಗೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಓಡಾಟ ನಡೆಸಲು ತೊಂದರೆಯುಂಟಾಗಲಿದೆ ಎಂಬ ಕಾರಣಕ್ಕೆ ಈ ಹೆದ್ದಾರಿಯನ್ನು ಗಣೇಶ ಚತುರ್ಥಿಯ ನಂತರ ಬಂದ್ ಮಾಡುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಈ ಹೆದ್ದಾರಿ ಬಂದ್ ಮಾಡುವ ಮುಂದಿನ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಿರುವುದಾಗಿ ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿದೆ.

ಲೋಕೋಪಯೋಗಿ ಇಲಾಖೆಯಿಂದ ಲಭ್ಯವಾದ ಮಾಹಿತಿಯ ಅನುಸಾರ- ಪರ್ವರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 6ವೇ ಪ್ಲೈಓವರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಪ್ಲೈಓವರ್ ನ ದೊಡ್ಡ ಭಾಗವನ್ನು ಅಳವಡಿಸಬೇಕಿದೆ. ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿಯ ಈ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡುವ ಅನಿವಾರ್ಯತೆಯಿದೆ. ಇದರಿಂದಾಗಿ ಪರ್ವರಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಸುಮಾರು 5 ತಿಂಗಳು ಬಂದ್ ಮಾಡುವ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಈ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದರೆ ಜನತೆಗೆ ಭಾರಿ ತೊಂದರೆಯುಂಟಾಗಲಿದೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡ ಲೊಕೋಪಯೋಗಿ ಇಲಾಖೆಯು ಗಣೇಶ ಚತುರ್ಥಿಯ ನಂತರ ಈ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ಮಾಹಿತಿ ನೀಡಿದೆ.

ಪರ್ವರಿ ಭಾಗದ ರಾಷ್ಟ್ರೀಯ ಹೆದ್ದಾರಿಯು ಮುಂಬಯಿ ಭಾಗದಿಂದ ಮಂಗಳೂರು ಭಾಗಕ್ಕೆ ಸಂಪರ್ಕಿಸುವ ಮುಖ್ಯ ರಾಷ್ಟ್ರೀಯ ಹೆದ್ದಾರಿಯಾಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಸಹಜವಾಗಿಯೇ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಇದೀಗ ಗಣೇಶ ಚತುರ್ಥಿಯ ಸಂದರ್ಭದಲ್ಲಿ ವಾಹನ ದಟ್ಟಣೆ ಇನ್ನಷ್ಟು ಹೆಚ್ಚಾಗುತ್ತದೆ. ಈ ರಾಷ್ಟ್ರೀಯ ಹೆದ್ದಾರಿಯನ್ನು ಈ ಸಂದರ್ಭದಲ್ಲಿ ಬಂದ್ ಮಾಡಿದರೆ ಹೆಚ್ಚಿನ ತೊಂದರೆಯುಂಟಾಬಹುದು ಎಂಬುದನ್ನು ಲೋಕೋಪಯೋಗಿ ಇಲಾಖೆ ಗಣನೆಗೆ ತೆಗೆದುಕೊಂಡಿದೆ.