ಸುದ್ಧಿಕನ್ನಡ ವಾರ್ತೆ
ಪಣಜಿ(ಮಡಗಾಂವ): ಮಡಗಾಂವ ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆಗೆ ಅಪ್ರಾಪ್ತ ಬಾಲಕಿ ಸಿಕ್ಕಿದ್ದಾಳೆ. ಮಕ್ಕಳ ಕಲ್ಯಾಣ ಸಮೀತಿಯ ಸಹಾಯದಿಂದ ಬಾಲಕಿಯನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಯಿತು. ನಂತರ ಆಕೆಯನ್ನು ಪಣಜಿ ಸಮೀಪದ ಮೆರ್ಶಿಯಲ್ಲಿರುವ ಅಪ್ನಾ ಘರ್ ಗೆ ಕಳುಹಿಸಲಾಗಿದೆ.

 

ಗೋವಾದ ಮಡಗಾಂವ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಸಂಖ್ಯೆ 1 ರಲ್ಲಿ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಆ ಸಮಯದಲ್ಲಿ, ರೈಲ್ವೆ ರಕ್ಷಣಾ ಪಡೆ ಉದ್ಯೋಗಿ ವಿಕ್ರಮ್ ಜೀತ್ ಭಯಭೀತ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ನೋಡಿದರು. ಬಾಲಕಿಯನ್ನು ವಿಚಾರಿಸಿದಾಗ, ಆಕೆ ತನ್ನೊಂದಿಗೆ ಯಾರೂ ಇಲ್ಲ ಎಂದು ಹೇಳಿಕೊಂಡಳು. ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ರೈಲ್ವೆ ನಿಲ್ದಾಣದಲ್ಲಿರುವ ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಈ ಬಗ್ಗೆ ಮಾಹಿತಿ ನೀಡಿದರು.

 

ಇಲಾಖೆಯ ಲಕ್ಷ್ಮಿ ಯಾದವ್ ಬಾಲಕಿಯನ್ನು ವಿಚಾರಿಸಿದರು. ರೈಲ್ವೆ ರಕ್ಷಣಾ ಪಡೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರದ ನೌಕರರು ವಿಚಾರಿಸಿದಾಗ, ಬಾಲಕಿಗೆ ಹದಿಮೂರು ವರ್ಷ ವಯಸ್ಸು ಎಂದು ತಿಳಿದುಬಂದಿದೆ. ಆಕೆ ಮೂಲತಃ ಉತ್ತರ ಪ್ರದೇಶದ ಗೋರಖ್‍ಪುರದವಳು ಮತ್ತು ಆಕೆ ಸೂರತ್‍ಗೆ ಹೋಗಲು ಬಯಸಿದ್ದಳು. ಆಕೆ ತಪ್ಪಾಗಿ ಬೇರೆ ರೈಲು ಹತ್ತಿದ ಕಾರಣ ಗೋವಾದ ಮಡಗಾಂವಗೆ ಬಂದಿಳಿದಿದ್ದಾಳೆ ಎಂದು ತಿಳಿದುಬಂದಿದೆ.

 

ಇದರ ನಂತರ, ರೈಲ್ವೆ ರಕ್ಷಣಾ ಪಡೆ ಬಾಲಕಿಯ ಪೆÇೀಷಕರನ್ನು ಸಂಪರ್ಕಿಸಿ ಬಾಲಕಿ ಗೋವಾದ ಮಡಗಂವದಲ್ಲಿದ್ದಾಳೆ ಎಂದು ತಿಳಿಸಿದರು. ಆಕೆಯ ಪೆÇೀಷಕರು ಬರುವವರೆಗೂ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದ್ದು, ಅವರು ಅಪ್ರಾಪ್ತ ಬಾಲಕಿಯನ್ನು ಮೆರ್ಶಿಯ ಅಪ್ನಾ ಘರ್‍ಗೆ ಕಳುಹಿಸಿದ್ದಾರೆ.