ಸುದ್ಧಿಕನ್ನಡ ವಾರ್ತೆ
ಪಣಜಿ: ಕಳೆದ ಕೆಲವು ದಿನಗಳಿಂದ ಗೋವಾದಲ್ಲಿ ಹರಡುತ್ತಿದ್ದ ಇಂಧನ ಕೊರತೆಯ ವದಂತಿಗಳಿಗೆ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಬುಧವಾರ ತೆರೆ ಎಳೆದಿದ್ದಾರೆ. ಗೋವಾ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಎಲ್‍ಪಿಜಿ ಸಿಲಿಂಡರ್‍ಗಳ ಕೊರತೆಯಿಲ್ಲ ಎಂದು ಅವರು ಪರ್ವರಿಯ ಸಚಿವಾಲಯದಲ್ಲಿ ಸಂಪುಟ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು, ನಾಗರಿಕರು ಭಯಭೀತರಾಗಿ ಪೆಟ್ರೋಲ್ ಪಂಪ್‍ಗಳಲ್ಲಿ ಜನಸಂದಣಿ ಸೇರದಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ, ರಾಜ್ಯದ ರಾಜಕೀಯ ಬೆಳವಣಿಗೆಗಳು, ವಾಣಿಜ್ಯ ಸಿಲಿಂಡರ್‍ಗಳ ಕೋಟಾ ಮತ್ತು ಪ್ರಮುಖ ಸರ್ಕಾರಿ ಯೋಜನೆಗಳ ಕುರಿತು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿನ ಇಂಧನ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಾವಂತ್- ಗೋವಾದಲ್ಲಿ ಪ್ರಸ್ತುತ ಮುಂದಿನ ಎಂಟು ದಿನಗಳವರೆಗೆ ಸಾಕಷ್ಟು ಪೆಟ್ರೋಲ್ ಸ್ಟಾಕ್ ಲಭ್ಯವಿದೆ ಮತ್ತು ಅದರ ನಂತರವೂ ಸರಬರಾಜು ಸರಾಗವಾಗಿ ಮುಂದುವರಿಯುತ್ತದೆ ಎಂದು ಹೇಳಿದರು. ಆದ್ದರಿಂದ, ಅನಗತ್ಯವಾಗಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಬುಕಿಂಗ್ ಮಾಡಿದ 25 ದಿನಗಳ ನಂತರ ಎಲ್ ಪಿಜಿ ಅನಿಲ ಸಿಲಿಂಡರ್‍ಗಳು ಲಭ್ಯವಿರುತ್ತವೆ, ಆದರೆ ಪ್ರಸ್ತುತ ವಾಣಿಜ್ಯ ಸಿಲಿಂಡರ್‍ಗಳ 20 ಪ್ರತಿಶತದಷ್ಟು ಕೋಟಾವನ್ನು ನಾಳೆಯಿಂದ (ಗುರುವಾರದಿಂದ ) 40 ಪ್ರತಿಶತಕ್ಕೆ ಹೆಚ್ಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ರಾಜಕೀಯ ರಂಗದ ಕುರಿತು ಮಾತನಾಡಿದ ಮುಖ್ಯಮಂತ್ರಿ, ಹಿರಿಯ ನಾಯಕ ದಿ. ರವಿ ನಾಯಕ್ ಅವರ ನಿಧನದಿಂದ ಖಾಲಿಯಾಗಿರುವ ಸಂಪುಟ ಸ್ಥಾನವನ್ನು ಪೊಂಡಾ ವಿಧಾನಸಭಾ ಉಪಚುನಾವಣೆಯ ನಂತರ ಭರ್ತಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಏಪ್ರಿಲ್ 9 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಖಚಿತ, ಮತ್ತು ಅದರ ನಂತರವೇ ಶಾಸಕರೊಬ್ಬರಿಗೆ ಸಚಿವರಾಗಲು ಅವಕಾಶ ನೀಡಲಾಗುವುದು ಎಂಬ ಮಾಹಿತಿ ನೀಡಿದರು.