ಸುದ್ಧಿಕನ್ನಡ ವಾರ್ತೆ
Goa Panaji: ನಮ್ಮ ಕರ್ಮಭೂಮಿ ಗೋವಾ, ದೇಶ ಚೆನ್ನಾಗಿದ್ದರೆ ರಾಜ್ಯ ಚೆನ್ನಾಗಿರುತ್ತದೆ. ರಾಜ್ಯ ಚೆನಾಗಿದ್ದರೆ ನಾವು ಚೆನಾಗಿರುತ್ತೇವೆ. ಇದು ನಮ್ಮ ಧ್ಯೇಯವಾಗಿರಬೇಕು. ಒಂದು ಸಂಘಟನೆಯ ಮೂಲಕ ಕಾರ್ಯಕ್ರಮ ಆಯೋಜಿಸುವುದು ಅಷ್ಟು ಸುಲಭವಲ್ಲ, ಯವುದೇ ಕಾರ್ಯಕ್ರಮ ಚಿಕ್ಕದಾಗಿದ್ದರೂ ಅಥವಾ ದೊಡ್ಡದಾಗಿದ್ದರೂ ಕೂಡ ಕಾರ್ಯಕ್ರಮ ಆಯೋಜನೆಗೆ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ ಎಂದು ಉದ್ಯಮಿಗಳಾದ ಅಶೋಕ ಕುಮಾರ ಶೆಟ್ಟಿ ನುಡಿದರು.
ಗೋವಾ ಕನ್ನಡ ಸಮಾಜ ಪಣಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ಪಣಜಿಯ ಮೆನೆಜಸ್ ಬ್ರಗಾಂಜ ಸಭಾಗೃಹದಲ್ಲಿ ಆಯೋಜಿಸಿದ್ದ ಕನ್ನಡ ಡಿಂಡಿಮ ಉತ್ಸವ-2024 ರ ಉಧ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.(Kannada Dindima Utsav-2024 organized by Goa Kannada Samaj Panaji, Department of Kannada and Culture, Government of Karnataka under the joint auspices of Panaji Menages Braganja Sabhagriha).
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಪತ್ರಕರ್ತರ ಸಂಘಟನೆಯ ಗೋವಾ ರಾಜ್ಯಾಧ್ಯಕ್ಷ ರಾಜತಿಲಕ್ ನಾಯ್ಕ ಮಾತನಾಡಿ- ಹೊರ ರಾಜ್ಯ ಗೋವಾದಲ್ಲಿರುವ ಕನ್ನಡಿಗರೆಲ್ಲ ಒಗ್ಗೂಡಿ ಗೋವಾದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ. ನಾವು ಎಲ್ಲರೂ ಎಲ್ಲೂ ಸಂಸ್ಕøತಿಯೊಂದಿಗೆ ಬೆರೆತು ಹೋಗುವುದಿಲ್ಲವೋ ಅಲ್ಲಿಯ ವರೆಗೆ ನಾವು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಸಂಸ್ಕøತಿ ಎನ್ನುವುದು ಚಿಕ್ಕ ಮಕ್ಕಳಿಂದಲೇ ಆರಂಭಗೊಳ್ಳಬೇಕು. ಇದರಿಂದಾಗಿ ನಾವು ಸಣ್ಣ ಮಕ್ಕಳಿಗೆ ಸಾಂಸ್ಕøತಿಕವಾಗಿ ಬೆರೆಯುವಂತೆ ಮಾಡನೇಕು, ಉತ್ತಮ ಶಿಕ್ಷಣ ನೀಡಬೇಕು. ಇದರಿಂದಾಗಿ ನಾವು ಸಮಾಜದಲ್ಲಿ ಉತ್ತಮ ಬದಲಾವಣೆ ಕಾಣಲು ಸಾಧ್ಯ. ನಾವು ನಮ್ಮ ಮಕ್ಕಳನ್ನು ಸಾಂಸ್ಕøತಿಕವಾಗಿ ಗಟ್ಟಿಯಾಗಿಸೋಣ. ಇದರಿಂದಾಗಿ ಹೊರ ರಾಜ್ಯದಲ್ಲಿ ನಾವೆಲ್ಲರೂ ಸಾಂಸ್ಕøತಿಕವಾಗಿ ಗಟ್ಟಿಯಾಗಿ ಬೇರೂರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಕಸಾಪ ಪಣಜಿ ತಾಲೂಕಾ ಘಟಕದ ಅಧ್ಯಕ್ಷ ಹನುಮಂತ ಗೊರವರ್ ಮಾತನಾಡಿ- ಗೋವಾ ಕನ್ನಡ ಸಮಾಜ ಕಳೆದ 40 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತ ಬಂದಿರುವುದು ಹೆಮ್ಮೆಯ ಸಂಗತಿ. ನಾವು ನಮ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಇಂತಹ ಸುಂದರ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಪ್ರಾಸ್ತಾವಿಕವಾಗಿ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ ಮಾತನಾಡಿ- ಕನ್ನಡ ಎನ್ನುವುದು ಕಲ್ಪವೃಕ್ಷವಿದ್ದಂತೆ, ನಾವು ಗೋವಾದಲ್ಲಿ ಉತ್ತಮ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡವನ್ನು ಬೆಳೆಸೋಣ. ಮುಂಬರುವ ದಿನಗಳಲ್ಲಿ ಕನ್ನಡಪರ ಕಾರ್ಯಕ್ರಮ ಆಯೋಜನೆಗೆ ಕನ್ನಡಿಗರು ತಮ್ಮ ಅಭಿಪ್ರಾಯ ತಿಳಿಸಿ, ನಮಗೆ ಕಾರ್ಯಕ್ರಮ ಆಯೋಜನೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಲಲಿತಾ ಭಜನಾ ಮಂಡಳಿಯ ಮಹಿಳೆಯರು ನಾಡಗೀತೆಯನ್ನು ಹಾಡಿದರು, ಅಂತೆಯೇ ಸಭಾ ಕಾರ್ಯಕ್ರಮದ ನಂತರ ಜಾನಪದ ಗೀತೆಯನ್ನು ಪ್ರಸ್ತುತಪಡಿಸಿದರು. ಅಂಜುದೇಸಾಯಿ ಮತ್ತು ಉಮಾರಾವ್ ಸಂಗಡಿಗರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಗೋವಾ ಕನ್ನಡ ಸಮಾಜದ ಉಪಾಧ್ಯಕ್ಷ ಶ್ರೀನಿವಾಸ್ ಪೈ ಕಾರ್ಯಕ್ರಮ ನಿರೂಪಿಸಿದರು. ಗೋವಾ ಕನ್ನಡ ಸಮಾಜದ ಸಮೀತಿಯ ಸದಸ್ಯ ಪ್ರಕಾಶ್ ಭಟ್ ಅತಿಥಿಗಳನ್ನು ಪರಿಚಯಿಸಿದರು. ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಶ್ರೀಕಾಂತ ಲೋಣಿ ಕೊನೆಯಲ್ಲಿ ವಂದನಾರ್ಪಣೆಗೈದರು. ಸ್ಲೊಸೈಕ್ಲಿಂಗ್ ನಲ್ಲಿ ಗಿನ್ನಿಸ್ ದಾಖಲೆ ಮಾಡಿದ ವೈಭವ್ ರಾಜಮನಿ ರವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗೋವಾ ರಾಜ್ಯದ ಮೂಲೆ ಮೂಲೆಗಳಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಭಾಗೃಹ ಸಂಪೂರ್ಣ ಭರ್ತಿಯಾಗಿತ್ತು. ಕನ್ನಡ ಡಿಂಡಿಮ ಉತ್ಸವದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆಯಿತು.