ಸುದ್ಧಿಕನ್ನಡ ವಾರ್ತೆ
Goa: ಓಲ್ಡ ಗೋವಾದ ಸಂತ ಫ್ರಾನ್ಸಿಸ್ ಜೇವಿಯರ್ ಅವರ ಶವ ದರ್ಶಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ, ಇದಕ್ಕೆ ಅನುಗುಣವಾಗಿ, ಗೋವಾದ ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ರಾಷ್ಟ್ರೀಯ ಭದ್ರತಾ ಪಡೆ (NSG) ಬಾಸಿಲಿಕಾ ಆಫ್ ಬೊಮ್ ಜೀಸಸ್ ಮತ್ತು ಕ್ಯಾಥೆಡ್ರಲ್ ಚರ್ಚ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಶುಕ್ರವಾರ ಭಯೋತ್ಪಾದನಾ ವಿರೋಧಿ ಅಭ್ಯಾಸವನ್ನು ನಡೆಸಿತು.

ಈ ಮಾಕ್ ಡ್ರಿಲ್ ನಲ್ಲಿ ಸುಮಾರು 400 ಯೋಧರು ಭಾಗವಹಿಸಿದ್ದರು. ಯಾವುದೇ ಸಂಭಾವ್ಯ ಬೆದರಿಕೆಗಳಿಗೆ ಸನ್ನದ್ಧತೆಯನ್ನು ಖಾತ್ರಿಪಡಿಸುವ ಮೂಲಕ ಬಿಕ್ಕಟ್ಟು ನಿರ್ವಹಣೆಯಂತಹ ವಿಷಯಗಳಿಗೆ ಈ ಬಾರಿ ಒತ್ತು ನೀಡಲಾಗಿದೆ. ಈ ವರ್ಷ, ಸಂಟ್ ಫ್ರಾನ್ಸಿಸ್ ಜೇವಿಯರ್ ಅವರ 17 ನೇ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಸಮಾರಂಭವನ್ನು ಪ್ರತಿ 10 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ.

ಸಮಾರಂಭವು ನವೆಂಬರ್ 21 ರಂದು ನೊವೆನಾ ದೊಂದಿಗೆ ಪ್ರಾರಂಭವಾಗಲಿದೆ ಮತ್ತು ಜನವರಿಯವರೆಗೆ ಮುಂದುವರಿಯುತ್ತದೆ. ಡಿಸೆಂಬರ್ 3 ಸಂತ ಫ್ರಾನ್ಸಿಸ್ ಜೇವಿಯರ್ ಅವರ ಹಬ್ಬದ ದಿನವಾಗಿದೆ. ಈ ಸಮಾರಂಭದಂದು ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ಗೋವಾಕ್ಕೆ ಭೇಟಿ ನೀಡುತ್ತಾರೆ. ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸಂಚಾರ ನಿರ್ವಹಣೆ, ಮೂಲಸೌಕರ್ಯ ನಿರ್ಮಾಣ, ಭದ್ರತಾ ವ್ಯವಸ್ಥೆ ಮತ್ತಿತರ ಪ್ರಮುಖ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿದ್ದು, ಕೆಲಸಗಳು ಅಂತಿಮ ಹಂತ ತಲುಪಿವೆ.