ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಬಯಲು ರಂಗಮಂದಿರದಲ್ಲಿ ಜಿಲ್ಲಾ ಪಂಚಾಯತ ಉತ್ತರಕನ್ನಡ, ತಾಲೂಕು ಪಂಚಾಯತ ಜೋಯಿಡಾ,ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯತ ನಂದಿಗದ್ದೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಗ್ರಾಮ ಸಭೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.
ಮಕ್ಕಳ ಗ್ರಾಮ ಸಭೆಯ ಆರಂಭದಲ್ಲಿ ಗ್ರಾಮ ಪಂಚಾಯತ ಕಾರ್ಯದರ್ಶಿಗಳಾದ ಗಜಾನನ ಸಾವರಕರರವರು ವೇದಿಕೆಗೆ ಗಣ್ಯರನ್ನು ಸ್ವಾಗತಿಸಿದರು. ನಾಡಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು.
ನಂದಿಗದ್ದೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ದತ್ತಾತ್ರೇಯರವರು ಮಕ್ಕಳ ಗ್ರಾಮ ಸಭೆಯ ಕುರಿತು ಪ್ರಾಸ್ತಾವಿಕ ಮಾತನಾಡಿ ಮಕ್ಕಳ ಗ್ರಾಮಸಭೆಯ ಉದ್ದೇಶ, ಹಕ್ಕು,ಕರ್ತವ್ಯಗಳ ಬಗ್ಗೆ,ಬಾಲ್ಯ ವಿವಾಹ, ಬಾಲಕಾರ್ಮಿಕರ, ಶಾಲೆಯಿಂದ ಹೊರಗುಳಿದ ಮಕ್ಕಳ ವಿಷಯದ ಬಗ್ಗೆ ಮಾತನಡಿದರು. ಗುಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರತಿನಿಧಿಯಾದ ಅರ್ಪಿತಾ ಭಾಗ್ವತರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಬೇಡಿಕೆ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಿರ್ಭೀತಿಯಿಂದ ಮುಕ್ತವಾಗಿ ಚರ್ಚಿಸುವಂತೆ ಸೂಚಿಸಿದರು.
ಸಭೆಯಲ್ಲಿ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ಶಾಲೆಗಳ ಮಕ್ಕಳು,ಶಿಕ್ಷಕರು ಭಾಗವಹಿಸಿ ತಮ್ಮ ತಮ್ಮ ಶಾಲೆಗಳಿಗೆ ಅವಶ್ಯಕತೆ ಇರುವ ಬೇಡಿಕೆಗಳನ್ನು ಸಲ್ಲಿಸಿದರು. ಗ್ರಾಮ ಪಂಚಾಯತ ಕಾರ್ಯದರ್ಶಿಗಳಾದ ಗಜಾನನ ಸಾವರಕರರವರು ಹಿಂದಿನ ವರ್ಷದ ಗ್ರಾಮ ಸಭೆಯ ಬೇಡಿಕೆ,ಈಡೇರಿಕೆಯ ಮಾಹಿತಿಯ ಜೊತೆಗೆ,ಕಾಮಗಾರಿ ಪೂರ್ಣಗೊಂಡ,ಮಂಜೂರಾದ ಕಾಮಗಾರಿಯ ಮಾಹಿತಿ ನೀಡಿ,ಮುಂದಿನ ಆರ್ಥಿಕ ವರ್ಷದ ಬೇಡಿಕೆಯ ಮಾಹಿತಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಅರುಣ ದೇಸಾಯಿ ನಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಈಗಾಗಲೇ ಅನುದಾನ ಲಭ್ಯತೆಯ ಅನುಗುಣವಾಗಿ ಬಹುತೇಕ ಬೇಡಿಕೆಗಳನ್ನು ಪೂರೈಸಿದ ಸಂತೃಪ್ತಿಯಿದ್ದು, ಸರ್ಕಾರ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಯಾದ ಪಂಚಾಯತದ ವತಿಯಿಂದ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.ಮಕ್ಕಳು ಉತ್ತಮ ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಶಿಕ್ಷಣ ಪಡೆದು ಮಂದಿನ ದಿನಗಳಲ್ಲಿ ಸಮಾಜದ ಶಕ್ತಿಯಾಗಿ ಎಂದು ಕರೆ ನೀಡಿದರು. ಗುಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜೋಸಫ್ ಸರ್ ರವರು ಮಾತನಾಡಿ ನಂದಿಗದ್ದೆ ಗ್ರಾಮ ಪಂಚಾಯತದವರು ಎಲ್ಲದಕ್ಕೂ ಮುಖ್ಯವಾದ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ್ದು,ನಮ್ಮೆಲ್ಲಾ ಶಾಲೆಯ ಶೈಕ್ಷಣಿಕ ಚಟುವಟಿಕೆಗಳ ಸಂಬಂಧಿಸಿದ ಕಾರ್ಯಗಳಿಗೆ ನಿರಂತರ ಸಹಕಾರ ನೀಡುವ ಮೂಲಕ ಪಂಚಾಯತದ ಕಾರ್ಯವೈಖರಿಯ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಮಾತನಾಡಿ ಮಕ್ಕಳ ಗ್ರಾಮ ಸಭೆಯ ಉದ್ದೇಶ ಮಕ್ಕಳಲ್ಲಿ ಬಾಲ್ಯದಿಂದಲೇ ಅವರ ಹಕ್ಕುಗಳು,ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಗ್ರಾಮಸಭೆಯನ್ನು ಆಯೋಜಿಸಿದೆ.ಮಕ್ಕಳು ಉತ್ತಮ ಶಿಕ್ಷಣದ ಜೊತೆ ಮೂಲಭೂತ ಸೌಕರ್ಯಗಳ ಕೊರತೆಗಳನ್ನು ಪರಿಹರಿಸಿಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳ ಲಾಭದ ಜೊತೆ ಉತ್ತಮ ಸಂಸ್ಕಾರಯುತ ಶಿಕ್ಷಣ ಪಡೆಯುವ ಮೂಲಕ,ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವ ಮೂಲಕ ಉತ್ತಮ ವಿದ್ಯಾರ್ಥಿಗಳಾಗಿ ಸಾಧನೆಯನ್ನು ತನ್ಮೂಲಕ ಊರಿಗೆ, ತಾಲೂಕು, ಜಿಲ್ಲೆಯ,ರಾಜ್ಯ,ದೇಶದ,ಪಾಲಕರ,ಪೋಷಕರ,ಶಿಕ್ಷಕರ ಕೀರ್ತಿಯನ್ನು ಹೆಚ್ಚಿಸಿ ಎಂದು ಹೇಳಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ,ಗುಂದ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ವಿದ್ಯಾ ನಾಯ್ಕ,ನಂದಿಗದ್ದೆ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಭುವನೇಶ್ವರ ಮೇಸ್ತಾ,ಯರಮುಖ ಶಾಲೆಯ ಸಹ ಶಿಕ್ಷಕಿಯಾದ ಪಾರ್ವತಿ ನಾಯಕ ಇದ್ದರು.
ಸಂಜೀವೀನಿ ಸ್ವಸಹಾಯ ಸಂಘಗಳ ಒಕ್ಕೂಟದ ಎಮ್.ಬಿ.ಕೆ ಭಾರತಿ ಹೆಗಡೆ ಲಿಂಗತ್ವ ಸಮಾನತೆಯ ರಾಷ್ಟ್ರೀಯ ಅಭಿಯಾನದ ಕುರಿತು ಮಾಹಿತಿಯನ್ನು ಈ ಸಂದರ್ಭದಲ್ಲಿ ನೀಡಿದರು. ಪ್ರೌಢಶಾಲೆಯ ಸಹ ಶಿಕ್ಷಕರಾದ ಫಕೀರಪ್ಪ ದರಿಗೊಂಡ,ಅತಿಥಿ ಶಿಕ್ಷಕರು ಭಾಗವಹಿಸಿದ್ದರು.ಗ್ರಾಮ ಪಂಚಾಯತ ಸಿಬ್ಬಂದಿಗಳಾದ ನಾರಾಯಣ ಬಾಂದೇಕರ, ಮನವೇಲ್ ಎಫ್,ಮಂಜುನಾಥ ಮಿರಾಶಿ,ರಾಹುಲ್ ವಾಜ್,ಕ್ಲೇವನ್ ಎಫ್ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.ಕೊನೆಯಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ದತ್ತಾತ್ರೇಯ ರವರು ವಂದನಾರ್ಪಣೆ ಸಲ್ಲಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
