ಸುದ್ಧಿಕನ್ನಡ ವಾರ್ತೆ
ಪಣಜಿ: ತನ್ನ ಪ್ರೇಯಸಿಗೆ ಬೇರೆಯವರೊಂದಿಗೆ ಅಕ್ರಮ ಸಂಬಂಧ ಇರುವ ಸಂಶಯದ ಮೇಲೆ ಆಕೆಯನ್ನು ಕರ್ನಾಟಕದ ಬೆಂಗಳೂರಿನಿಂದ ಗೋವಾಕ್ಕೆ ಕರೆತಂದು ಗೋವಾದಲ್ಲಿ ಕತ್ತುಕೊಯ್ದು ಕೊಲೆಗೈದ ಸಂಜಯ ಕೆವಿನ್ ಎಂ (ಬೆಂಗಳೂರು) ಈತನ ವಿರುದ್ಧ ದಕ್ಷಿಣ ಗೋವಾ ನ್ಯಾಯಾಲಯ ಕೊಲೆ ಹಾಗೂ ಪುರಾವೆ ನಷ್ಠಗೊಳಿಸಿರುವ ಕುರಿತಂತೆ ಆರೋಪ ನಿಶ್ಚಿತಗೊಳಿಸಿದೆ.

ತನ್ನ ಪ್ರಿಯಕರನ ಜೊತೆ ರೋಶನ್ ಮೋಜೆಸ್ (22) ಇವಳು ಸಂಜಯ ಕೆವಿನ್ ಈತನೊಂದಿಗೆ ಜೂನ್ 15 ರಂದು ಗೋವಾಕ್ಕೆ ಬಂದಿದ್ದಳು. ಆದರೆ ಧಾರಾಬಾಂದೋಡಾದಲ್ಲಿ ಕರ್ನಾಟಕದ ಬಸ್ ಇಳಿದು ಜಂಗಲ್ ನಲ್ಲಿ ಕರೆದೊಯ್ದು ತನ್ನ ಪ್ರೇಯಸಿಯ ಕತ್ತು ಕೊಯ್ದು ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಯವು ಪುರಾವೆಗಳ ಆಧಾರದ ಮೂಲಕ ಈತನಿಗೆ ಆರೋಪ ನಿಶ್ಚಿತಗೊಳಿಸುವ ಆದೇಶ ಹೊರಡಿಸಿದೆ.

ಗೋವಾದ ಪೊಂಡಾ ಪೋಲಿಸ್ ನಿರೀಕ್ಷಕ ವಿಜಯಕುಮಾರ್ ಕವಳೇಕರ್ ರವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಂಪೂರ್ಣ ಆರೋಪಪತ್ರ ದಾಖಲಿಸಿದ್ದಾರೆ. ಶಂಕಿತ ಆರೋಪಿ ಸಂಜಯ್ ಕೆವಿನ್ ನನ್ನು ಗೋವಾದ ಕೋಲ್ವಾಳ ಕಾರಾಗೃಹದಿಂದ ಮಡಗಾಂವ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಕೊಲೆ ಘಟನೆಯ ನಂತರ ಆರೋಪಿಯನ್ನು ಕರ್ನಾಟಕದ ಹುಬ್ಬಳ್ಳಿಯಲ್ಲಿ ಬಂಧಿಸಿ ಕರೆತರಲಾಗಿತ್ತು.

ಗೋವಾದ ಧಾರಾಬಾಂದೋಡಾ ಅರಣ್ಯದಲ್ಲಿ ಆರೋಪಿ ಕೊಲೆ ನಡೆಸಿದ ಸಂದರ್ಭದಲ್ಲಿ ಆತನ ಬಳಿಯಿದ್ಧ ಕರ್ನಾಟಕದಿಂದ ಗೋವಾಕ್ಕೆ ಬಂದಿದ್ದ ಕೆಎಸ್ ಆರ್ ಟಿಸಿ ಬಸ್ ಟಿಕೇಟ್ ಕೊಲೆಯಾದ ಸ್ಥಳದಲ್ಲಿ ಬಿದ್ದಿತ್ತು. ಗೋವಾಕ್ಕೆ ಬಂದು ಪ್ರೇಯಸಿಯ ಕೊಲೆ ನಡೆಸಿದ ನಂತರ ಆರೋಪಿ ಸಂಜಯ ಬೆಂಗಳೂರಿಗೆ ವಾಪಸ್ಸಾಗಿದ್ದ. ಗೋವಾ ಪೋಲಿಸರು ಕರ್ನಾಟಕ ಪೋಲಿಸರ ಸಹಕಾರದೊಂದಿಗೆ ಈ ಆರೋಪಿಯನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಪೋಲಿಸರು ಸವಿಸ್ತಾರ ತನಿಖೆ ನಡೆಸಿ ಅಗತ್ಯ ದಾಖಲೆ ಪುರಾವೆಗಳ ಆರೋಪಪತ್ರವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.

ಏನಿದು ಘಟನೆ…?
ಆರೋಪಿ ಸಂಜಯ ಕೆವಿನ್ ಹಾಗೂ ರೋಶನಿ ಮೋಜೆಸ್ ಇವರಿಬ್ಬರೂ ಬೆಳಗಳೂರಿನಲ್ಲಿ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ (ಪ್ರೇಮಿಗಳು) ಸ್ನೇಹಿತರಾಗಿದ್ದರು. ಸಂಜಯ ಈತ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ, ತಾನು ಗೋವಾಕ್ಕೆ ಹೋಗುವುದಾಗಿ ಹೇಳಿದ್ದ. ಆಗ ಹುಬ್ಬಳ್ಳಿಯಲ್ಲಿಯೇ ಇದ್ದ ರೋಶನಿ ಇವಳು ತಾನೂ ಕೂಡ ನಿನ್ನೊಂದಿಗೆ ಬರುವುದಾಹಿ ತಿಳಿಸಿದ್ದಳು, ಇಬ್ಬರೂ ಕೂಡ ಕೆಎಸ್ ಆರ್ ಟಿಸಿ ಬಸ್ ಮೂಲಕ ಗೋವಾಕ್ಕೆ ಬಂದಿದ್ದರು. ಮಾರ್ಗಮಧ್ಯದಲ್ಲಿ ಇಬ್ಬರೂ ಜಗಳವಾಡುತ್ತಿದ್ದದರಿಂದ ಬಸ್ ಕಂಡಕ್ಟರ್ ಗೋವಾದ ಧಾರಾಬಾಂದೋಡಾದಲ್ಲಿಯೇ ಇಬ್ಬರನ್ನೂ ಬಸ್ಸಿನಿಂದ ಕೆಳಕ್ಕಿಳಿಸಿದ್ದ ಎನ್ನಲಾಗಿದೆ.

ನಂತರ ಆರೋಪಿಯು ತನ್ನ ಪ್ರೇಯಸಿಯನ್ನು ರಸ್ತೆ ಬದಿಯಲ್ಲಿರುವ ಅರಣ್ಯಕ್ಕೆ ಕರೆದೊಯ್ದು ಅಲ್ಲಿ ಕತ್ತುಕೊಯ್ದು ಕೊಲೆಗೈದಿದ್ದ. ನಂತರ ಆರೋಪಿ ಬೆಂಗಳೂರಿಗೆ ಪರಾರಿಯಾಗಿದ್ದ.