ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಗುಂದದ ಆಸ್ಪತ್ರೆಗೆ ಎಂ. ಬಿ. ಬಿ.ಎಸ್ ವೈದ್ಯರನ್ನು ನೇಮಿಸುವಂತೆ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಸಾವರ್ಕರ್ ಅವರು ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದ ಮೂಲಕ ಮನವಿ ಮಾಡಿರುವ ಅವರು ಗುಂದ ಆಸ್ಪತ್ರೆಯಲ್ಲಿ ಎಂಬಿಬಿಎಸ್ ವೈದ್ಯರ ಸೇವೆ ಇಲ್ಲದ ಕಾರಣ ಅನಾರೋಗ್ಯ ಪೀಡಿತರು, ಆರೋಗ್ಯ ಸಹಾಯಕಿಯರ, ಆಶಾ ಕಾರ್ಯಕರ್ತೆಯರ ಅವರ ಕೈಲಾದಷ್ಟು ಸಣ್ಣ-ಪುಟ್ಟ ಸೇವೆಯಲ್ಲಿ ಬದುಕುವಂತಹಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸುಸಜ್ಜಿತ ಕಟ್ಟಡ ಹೊಂದಿದ್ದು, ಎಂಬಿಬಿಎಸ್ ವೈದ್ಯರ ಸೇವೆ ಇಲ್ಲದ ಕಾರಣ, ಹೆಚ್ಚಿನ ಚಿಕಿತ್ಸೆಗೆ ದೂರದ 40 ಕಿ.ಮೀ. ದಾಂಡೇಲಿಗೆ ಇಲ್ಲವೇ 30 ಕಿ.ಮೀ. ದೂರದ ಜೋಯಿಡಾಕ್ಕೆ ತುರ್ತು ಸಂದರ್ಭದಲ್ಲಿ ಖಾಸಗಿ ವಾಹನ ಮಾಡಿಕೊಂಡು ಹೋಗಬೇಕಾಗುತ್ತದೆ. ಈಗಾಗಲೇ ದಾಂಡೇಲಿ – ಗುಂದ ರಸ್ತೆಯ ಕೈಟಾನಾಲಾ ಸೇತುವೆಯ ಅಂಚು ಕುಸಿದ ಪರಿಣಾಮ ವಾಹನ ಸಂಚಾರ ಬಂದ್ ಆಗಿದೆ. ತುರ್ತು ಸಂದರ್ಭದಲ್ಲಿ ರಾತ್ರಿಯ ವೇಳೆ ಸಂಚಾರ ಅಪಾಯಕಾರಿಯಾಗಿದೆ. ಕುಂಬಾರವಾಡಾ ಬಸ್ ,ಇನ್ನಿತರ ವಾಹನಗಳ ಮೂಲಕ ಹೋಗುವುದಾದರೆ ಸುತ್ತುವರೆದು ಹೋಗುವ ಅನಿವಾರ್ಯತೆ ಎದುರಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅಭಿವೃದ್ಧಿ ಪರ ಮಾನ್ಯ ಶಾಸಕರು ಮತ್ತು ಉಸ್ತುವಾರಿ ಸಚಿವರು ಜಿಲ್ಲಾಡಳಿತದ ಮೂಲಕ ವೈದ್ಯರ ನೇಮಕ ಕುರಿತಂತೆ ತ್ವರಿತವಾಗಿ ಸ್ಪಂದಿಸಬೇಕು. ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ
ಬಿ.ಎಸ್ ಪೂರೈಸಿದ ಬಳಿಕ ವಿಧ್ಯಾರ್ಥಿಗಳು ಹಳ್ಳಿಗಳಲ್ಲಿ ಕಡ್ಡಾಯ ಸೇವೆ ಸಲ್ಲಿಸುವ ಅವಕಾಶದಲ್ಲಿ ಈ ಹಿಂದೆ ವೈದ್ಯರು ಒಂದು ವರ್ಷ ಉತ್ತಮ ಸೇವೆಯನ್ನು ನೀಡಿದ್ದರು.ಕನಿಷ್ಠ ಪಕ್ಷ ಈ ಸೇವೆಯನ್ನಾದರೂ ನೀಡಿದರು ಅನುಕೂಲವಾಗುತ್ತಿತ್ತು ಎಂದು ಗುಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಂ.ಬಿ.ಬಿ.ಎಸ್ ವೈದ್ಯರನ್ನು ನೇಮಕ ಮಾಡುವಂತೆ ಅವರು ಮನವಿ ಮಾಡಿದ್ದಾರೆ.