ಸುದ್ದಿ ಕನ್ನಡ ವಾರ್ತೆ

ನೆರೆಯ ಮಹಾರಾಷ್ಟ್ರದ ಕೊಂಕಣ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಆಗುತ್ತಿದೆ. ಇದರ ಪರಿಣಾಮವಾಗಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಪ್ರಸ್ತುತ 2.52 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದುಬರುತ್ತಿದೆ. ಅಪಾಯ ಹಂತ 2.90 ಲಕ್ಷ ಕ್ಯೂಸೆಕ್ ಇರುವುದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ.

ಚಿಕ್ಕೋಡಿ, ಕಾಗವಾಡ, ಅಥಣಿ ಮತ್ತು ರಾಯಬಾಗ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಜನರು ಸಂಕಷ್ಟದಲ್ಲಿದ್ದು, ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಆತಂಕ ಮನೆ ಮಾಡಿದೆ. ಹೊಲ ಜಮೀನುಗಳು ಈಗಾಗಲೇ ಮುಳುಗಡೆಯಾಗುತ್ತಿದ್ದು, ಸಾರಿಗೆ ಸಂಪರ್ಕಕ್ಕೂ ಅಡಚಣೆ ಉಂಟಾಗಿದೆ.

ಮಳೆಯ ಹಿನ್ನೆಲೆ: ರಾಜ್ಯದ ಗಡಿ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಿದ್ದರೂ, ಕೊಂಕಣ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಮಹಾರಾಷ್ಟ್ರದ ಕೋಯ್ನಾ ಕಾಳಮ್ಮವಾಢಿ.ರಾಧಾನಗರಿ ಸೇರಿದಂತೆ ಹಲವು ಜಲಾಶಯಗಳಿಂದ ನೀರು ಬಿಡುಗಡೆ ಮುಂದುವರಿದಿದೆ. ಇದರ ಪರಿಣಾಮ ಕೃಷ್ಣಾ ಹಾಗೂ ಅದರ ಉಪನದಿಗಳು ಉಕ್ಕಿ ಹರಿಯುತ್ತಿವೆ.

ಅಧಿಕಾರಿಗಳ ಪರಿಶೀಲನೆ:
ಜಿಲ್ಲಾ ಆಡಳಿತ ಮತ್ತು ಸ್ಥಳೀಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಗಾ ಇಟ್ಟುಕೊಂಡಿದ್ದಾರೆ. ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಅಗತ್ಯವಿದ್ದರೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗಿದೆ. ನದಿ ತೀರದಲ್ಲಿ ವಾಸಿಸುವವರು ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಲಾಗಿದೆ.