ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಲು ಐದಾರು ಕಡೆ ಜಾಗವನ್ನು ನೋಡಿದ್ದೇವೆ. ಕನ್ನಡ ಭವನಕ್ಕೆ ಒಂದು ಸೂಕ್ತವಾದ ಜಾಗವನ್ನು ನಿರ್ಣಯ ಮಾಡಲು ಮತ್ತು ಅದಕ್ಕೆ ಬರುವ ಎಲ್ಲ ವಿಘ್ನಗಳನ್ನು ನಿವಾರಿಸಲು ವಿಘ್ನೇಶ್ವರ ನಿವಾರಣೆ ಮಾಡಲಿ. ಕನ್ನಡ ಭವನದಲ್ಲಿ ಗೋವಾದ ಕನ್ನಡಿಗರು ಕುಳಿತು ಕಾರ್ಯಕ್ರಮವನ್ನು ಆಯೋಜನೆ ಮಾಡುವಂತಾಗಲಿ. ಕನ್ನಡ ಭವನವನ್ನು ಕಲ್ಯಾಣ ಭವನದಂತೆಯೇ ನಿರ್ಮಾಣ ಮಾಡೋಣ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ್ ನುಡಿದರು.
ಗೋವಾದ ಮಾಪ್ಸಾದಲ್ಲಿ ಕವಿಶೈಲ ಕನ್ನಡ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಕನ್ನಡ ಗಣಪನಿಗೆ ಪೂಜೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು. ಗೋವಾದಲ್ಲಿ ವಿವಿಧ ಕಾರಣಗಳಿಗೆ ಕನ್ನಡಿಗರು ಉದ್ಯೋಗ ಅರಸಿ ಬಂದು ಇಲ್ಲಿ ನೆಲೆಸಿದ್ದಾರೆ. ಇಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕನ್ನಡಿಗರು ಇರುವುದು ನಮಗೆ ಹೆಮ್ಮೆ ಅನ್ನಿಸುತ್ತದೆ. ಇಲ್ಲಿ ಕನ್ನಡ ಗಣಪನನ್ನು ಪ್ರತಿಷ್ಠಾಪಿಸಲು ಆರಂಭಿಸಿ 12 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೀರಿ, ಈ ಹನ್ನೆರಡು ವರ್ಷಗಳಲ್ಲಿ ಕನ್ನಡಿಗರ ಸಂಕಷ್ಟವೆಲ್ಲವೂ ದೂರವಾಗಿ ಕನ್ನಡ ಭವನ ನಿರ್ಮಾಣದ ಕನಸು ನನಸಾಗುತ್ತಿದೆ ಎಂದು ಸೋಮಣ್ಣ ಬೇವಿನಮರದ್ ನುಡಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ ಮಾತನಾಡಿ-ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಕನಸು ನನಸಾಗಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಹಗಲಿರುಳು ಶೃಮಿಸುತ್ತಿದ್ದಾರೆ. ಗೋವಾದ ಕನ್ನಡ ಭವನದ ವಿಘ್ನ ಇಂದಿಗೆ ದೂರವಾಯಿತು ಎಂದು ಸಿದ್ಧಣ್ಣ ಮೇಟಿ ನುಡಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಪ್ರಕಾಶ ಮತ್ತೀಹಳ್ಳಿ, ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಪಡದಯ್ಯ ಹಿರೇಮಠ, ಬಸವಂತಪ್ಪ ಭರಮಣ್ಣನವರ್, ವಿಜಯಪುರ ಜಿಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ಗೋಪಿ ಮತ್ತಿತರರು ಉಪಸ್ಥಿತರಿದ್ದರು. ಕಸಾಪ ಗೋವಾ ರಾಜ್ಯ ಗೌ.ಕಾರ್ಯದರ್ಶಿ ನಾಗರಾಜ ಗೋಂದಕರ್ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು, ತವರಪ್ಪ ಲಮಾಣಿ ಕೊನೆಯಲ್ಲಿ ವಂದನಾರ್ಪಣೆಗೈದರು.