ಸುದ್ಧಿಕನ್ನಡ ವಾರ್ತೆ
ಪಣಜಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲ್ ವಿರುದ್ಧ ಸಿಬಿಐ ದಾಖಲಿಸಿರುವ ಮದ್ಯ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇಯ ಹಾಗೂ ಅಂತಿಮ ಆರೋಪಪತ್ರಕ್ಕೆ ಸಂಬಂಧಿಸಿದಂತೆ ಗೋವಾದ ಇಬ್ಬರು ರಾಜಕೀಯ ನಾಯಕರ ಹೇಳಿಕೆ ಅತ್ಯಂತ ಮಹತ್ವದ್ದಾಗಿ ಪರಿಣಮಿಸಿದೆ.
ಇದರಿಂದಾಗಿ ದೇಹಲಿ ಮುಖ್ಯಮಂತ್ರಿ ಕೇಜರಿವಾಲ್ ಭವಿಷ್ಯ ಗೋವಾದ ಇಬ್ಬರು ರಾಜಕೀಯ ನಾಯಕರ ಕೈಯ್ಯಲ್ಲಿದ್ದು, ಈ ನಾಯಕರು ವಿಚಾರಣೆ ವೇಳೆ ಯಾವ ಹೇಳಿಕೆ ನೀಡಲಿದ್ದಾರೆ ಎಂಬುದರ ಮೇಲೆ ಅಂತಿಮ ಆರೋಪಪತ್ರ ದಾಖಲಾಗಲಿದೆ. ಸಿಬಿಐ ಅಂತಿಮ ಆರೋಪಪತ್ರದಲ್ಲಿ ಗೋವಾದ ಮಾಜಿ ಮಂತ್ರಿ ಮಹಾದೇವ ನಾಯ್ಕ ಹಾಗೂ ಆಮ್ಆದ್ಮಿ ಪಕ್ಷದ ಸತ್ಯವಿಜಯ ನಾಯ್ಕ ರವರ ಹೇಳಿಕೆಯನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ದೆಹಲಿಯ ಮದ್ಯ ಅಕ್ರಮ ಪ್ರಕರಣವು ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಹಲವು ನಾಯಕರು ಬಂಧನಕ್ಕೊಳಗಾಗಿದ್ದರು. ಸದ್ಯ ಇವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ದೆಹಲಿಯ ಮದ್ಯ ಅಕ್ರಮ ಹಣವನ್ನು ಗೋವಾದ 2022 ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಖರ್ಚು ಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು. ಆಮ್ ಆದ್ಮಿ ಪಕ್ಷವು ಈ ಆರೋಪವನ್ನು ತಳಳ್ಳಿಹಾಕಿದ್ದರೂ ಕೂಡ ಸಿಬಿಐ ತಂಡ ಗೋವಾಕ್ಕೆ ಬಂದು ಈ ಪ್ರಕರಣದ ವಿಚಾರಣೆ ನಡೆಸಿತ್ತು.